ಮುಂಬೈನ ‘ದಿ ಟಾಟಾ ಪವರ್ ಕಂಪನಿ ಲಿಮಿಟೆಡ್’ ಸಂಸ್ಥೆಯು ಹೆಸ್ಕಾಂ ಸೇರಿದಂತೆ ರಾಜ್ಯದ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಗಿ ಕೋರಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (KERC) ಅರ್ಜಿ ಸಲ್ಲಿಸಿದೆ. ಇದನ್ನು ಖಂಡಿಸಿ ಚಿಕ್ಕೋಡಿಯ ಹೆಸ್ಕಾಂ ವಿಭಾಗೀಯ ಕಚೇರಿ ಮುಂದೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕೆಪಿಟಿಸಿಎಲ್ ಒಕ್ಕೂಟದ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿ, ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕೆಪಿಟಿಸಿಎಲ್ ನೌಕರರ ಒಕ್ಕೂಟದ ಕಾರ್ಯದರ್ಶಿ ಎಸ್. ಬಿ. ಕುಲಕರ್ಣಿ, “ವಿದ್ಯುತ್ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸಿದರೆ ರೈತರಿಗೆ ಸಿಗುತ್ತಿರುವ ಉಚಿತ ವಿದ್ಯುತ್ ಹಾಗೂ ‘ಗಂಗಾ ಕಲ್ಯಾಣ’ದಂತಹ ಜನಪರ ಯೋಜನೆಗಳು ಕೈತಪ್ಪಲಿವೆ. ಕಾರ್ಪೊರೇಟ್ ಸಂಸ್ಥೆಗಳ ಲಾಭಕೋರ ನಿಯಮಗಳಿಂದಾಗಿ ರೈತರು ಮತ್ತು ಗ್ರಾಹಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಸರ್ಕಾರ ತಕ್ಷಣವೇ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಾಗೂ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಹೆಸ್ಕಾಂ ಅಧಿಕಾರಿಗಳಾದ ಸುಪ್ರಭಾ ಬಂಡಗರ, ಸಂಜಯ್ ಸುಖಸಾರೆ ಹಾಗೂ ಎಸ್. ಬಿ. ತಹಸೀಲ್ದಾರ್ ಮಾತನಾಡಿ, “ನಮ್ಮ ರಾಜ್ಯದ ವಿದ್ಯುತ್ ವಲಯದಲ್ಲಿ ಅತ್ಯುತ್ತಮ ಮೂಲಸೌಕರ್ಯ ಹಾಗೂ ತಾಂತ್ರಿಕ ಸಾಮರ್ಥ್ಯವಿದೆ. ಹೀಗಿರುವಾಗ ಪರರಾಜ್ಯದ ಲಾಭಕೋರ ಸಂಸ್ಥೆಗೆ ಇಲ್ಲಿನ ವಿದ್ಯುತ್ ಕ್ಷೇತ್ರವನ್ನು ಧಾರೆ ಎರೆಯಲು ಬಿಡುವುದಿಲ್ಲ. KERC ತಕ್ಷಣವೇ ಟಾಟಾ ಪವರ್ ಸಂಸ್ಥೆಯ ಅರ್ಜಿಯನ್ನು ತಿರಸ್ಕರಿಸಬೇಕು,” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹೆಸ್ಕಾಂ ಅಧಿಕಾರಿಗಳಾದ ಸಚಿನ ಮಗದುಮ,ಎನ್. ಟಿ. ಪಾಟೀಲ, ಡಿ. ಎ. ಮುಲ್ಲಾ ಸೇರಿದಂತೆ ವಿಭಾಗೀಯ ಕಚೇರಿಯ ನೂರಾರು ಸಿಬ್ಬಂದಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.
