Chikkodi

ಕೊಲ್ಹಾಪುರದ ಸಿದ್ಧಗಿರಿ ಆಸ್ಪತ್ರೆಯಲ್ಲಿ ಜಾಗತಿಕ ದಾಖಲೆ: ಹದಿನೇಳು ಗಂಟೆಗಳ ಸಂಕೀರ್ಣ ‘ಬ್ರೈನ್ ಬೈಪಾಸ್’ ಸರ್ಜರಿ ಯಶಸ್ವಿ!

Share

ಕೊಲ್ಹಾಪುರ:ವೈದ್ಯಕೀಯ ಲೋಕವೇ ಬೆರಗಾಗುವಂತಹ ಅಪರೂಪದ ಮತ್ತು ಅತ್ಯಂತ ಸಂಕೀರ್ಣವಾದ ಬ್ರೈನ್ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಭಾರತದ ವೈದ್ಯರು ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಕೊಲ್ಹಾಪುರದ ಕಣೇರಿಮಠದಲ್ಲಿರುವ ಸಿದ್ಧಗಿರಿ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್‌ನಲ್ಲಿ ವಿಶ್ವವಿಖ್ಯಾತ ನರಶಸ್ತ್ರಚಿಕಿತ್ಸಕ ಡಾ. ಶಿವಶಂಕರ ಮರಜಕ್ಕೆ ಅವರ ನೇತೃತ್ವದ ತಂಡವು ಸತತ 17 ಗಂಟೆಗಳ ಕಾಲ ಸುದೀರ್ಘ ಕಾರ್ಯಾಚರಣೆ ನಡೆಸಿ, ವಿಶ್ವದಲ್ಲೇ ಮೊದಲ ಎಂದು ನಂಬಲಾದ ಅತ್ಯಂತ ಅಪರೂಪದ ಬ್ರೈನ್ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ರೋಗಿಯು ಕ್ಯಾವರ್ನಸ್ ಇಂಟರ್ನಲ್ ಕ್ಯಾರೋಟಿಡ್ ಆರ್ಟರಿ (ICA) ಯ ಬೃಹತ್ ಎನ್ಯೂರಿಝಮ್ (ರಕ್ತನಾಳದ ಬಲೂನ್ ಗಂಟು) ಸಮಸ್ಯೆಯಿಂದ ಬಳಲುತ್ತಿದ್ದರು. ಇದರೊಂದಿಗೆ ರೋಗಿಯ ಮೆದುಳಿನಲ್ಲಿ ಭ್ರೂಣಾವಸ್ಥೆಯ ರಕ್ತನಾಳವಾದ ‘ಪರ್ಸಿಸ್ಟಂಟ್ ಪ್ರಿಮಿಟಿವ್ ಟ್ರೈಜೆಮಿನಲ್ ಆರ್ಟರಿ’ ಕೂಡ ಇತ್ತು. ಈ ರೋಗಗ್ರಸ್ತ ICA ರಕ್ತನಾಳವೇ ಮೆದುಳಿನ ಹಿಂಭಾಗದ ಸರ್ಕ್ಯುಲೇಶನ್ ಅಂದರೆ ಬ್ರೈನ್‌ಸ್ಟೆಮ್‌ಗೆ (ಸಣ್ಣ ಮಿದುಳು) ಸಂಪೂರ್ಣ ರಕ್ತವನ್ನು ಪೂರೈಸುತ್ತಿತ್ತು. ವೈದ್ಯಕೀಯ ಇತಿಹಾಸ ಹಾಗೂ ಸಾಹಿತ್ಯದಲ್ಲಿ ಇಂತಹ ಶರೀರರಚನಾ ಜೋಡಣೆ ಇದುವರೆಗೆ ಜಗತ್ತಿನ ಎಲ್ಲಿಯೂ ವರದಿಯಾಗಿರಲಿಲ್ಲ.

ಎನ್ಯೂರಿಝಮ್‌ಗೆ ಚಿಕಿತ್ಸೆ ನೀಡುವಾಗ ಮೆದುಳನ್ನು ರಕ್ಷಿಸುವುದು ದೊಡ್ಡ ಸವಾಲಾಗಿತ್ತು. ಇದಕ್ಕಾಗಿ ಅತ್ಯಂತ ಸಂಕೀರ್ಣವಾದ ರಿವ್ಯಾಸ್ಕ್ಯುಲರೈಸೇಶನ್ (ಬೈಪಾಸ್) ಅಗತ್ಯವಿತ್ತು. ಒಂದು ಸಣ್ಣ ತಪ್ಪು ಸಂಭವಿಸಿದರೂ ಬ್ರೈನ್‌ಸ್ಟೆಮ್‌ಗೆ ರಕ್ತದ ಹರಿವು ನಿಂತು ರೋಗಿ ಸಾವನ್ನಪ್ಪುವ ಅಪಾಯವಿತ್ತು. ಆದರೆ ನರಶಸ್ತ್ರಚಿಕಿತ್ಸೆ, ಅರಿವಳಿಕೆ, ನ್ಯೂರೋಫಿಸಿಯಾಲಜಿ ಮತ್ತು ನರ್ಸಿಂಗ್ ತಂಡಗಳ ಪರಿಪೂರ್ಣ ಸಮನ್ವಯ ಹಾಗೂ ಅಚಲ ಪರಿಶ್ರಮದಿಂದಾಗಿ ಈ ಕೌಶಲ್ಯ, ವಿಜ್ಞಾನ ಮತ್ತು ಆತ್ಮದ ಮ್ಯಾರಥಾನ್ ಯಶಸ್ವಿಯಾಗಿದೆ.

ಇದು ಸಂಪೂರ್ಣವಾಗಿ ಅಪರಿಚಿತ ಪ್ರದೇಶವಾಗಿತ್ತು. ಒಂದು ತಪ್ಪು ಹೆಜ್ಜೆಯೂ ಖಚಿತ ಸಾವಿಗೆ ಕಾರಣವಾಗುತ್ತಿತ್ತು. ಆದರೆ ನಮ್ಮ ತಂಡದ ಶ್ರಮ, ಸೂಕ್ಷ್ಮ ಸಿದ್ಧತೆ ಮತ್ತು ಈಶ್ವರ ಕೃಪೆಯಿಂದ ನಾವು ಇದನ್ನು ಪೂರ್ಣಗೊಳಿಸಿದೆವು. ನಾವು ಕೇವಲ ಒಂದು ರಕ್ತನಾಳವನ್ನು ಬೈಪಾಸ್ ಮಾಡಲಿಲ್ಲ, ಸಾಧ್ಯತೆಯ ಮಿತಿ ಎಂದು ಭಾವಿಸಿದ್ದನ್ನೇ ಬೈಪಾಸ್ ಮಾಡಿದೆವು. ಇದು ಪಠ್ಯಪುಸ್ತಕಗಳಲ್ಲಿ ಇರಲಿಲ್ಲ, ನಮ್ಮ 100+ ಬೈಪಾಸ್‌ಗಳ ಅನುಭವದಲ್ಲಿ ಇತ್ತು ಎಂಬುದು ಡಾ. ಶಿವಶಂಕರ ಮರಜಕ್ಕೆಯವರ ಅನಿಸಿಕೆ

ವೈದ್ಯರಲ್ಲೊಬ್ಬರು
ಬ್ರೈನ್ ಬೈಪಾಸ್ ಶಸ್ತ್ರಚಿಕಿತ್ಸೆಯು ಮೆದುಳಿನ ಸರ್ಜರಿಗಳಲ್ಲೇ ಕೊನೆಯ ಆಯ್ಕೆಯಾಗಿದ್ದು, ಇಲ್ಲಿ ಶೂನ್ಯ ದೋಷಕ್ಕೆ ಮಾತ್ರ ಅವಕಾಶವಿರುತ್ತದೆ. ಭಾರತದಲ್ಲಿ ಇಂತಹ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಅರ್ಹರಾಗಿರುವ ಬೆರಳೆಣಿಕೆಯ (ಹತ್ತರಲ್ಲಿ ಒಬ್ಬರು) ಪ್ರಮುಖ ನರಶಸ್ತ್ರಚಿಕಿತ್ಸಕರಲ್ಲಿ ಡಾ. ಶಿವಶಂಕರ ಮರಜಕ್ಕೆ ಒಬ್ಬರಾಗಿದ್ದಾರೆ. ಈಗಾಗಲೇ 100ಕ್ಕೂ ಹೆಚ್ಚು ಯಶಸ್ವಿ ಬ್ರೈನ್ ಬೈಪಾಸ್ ಶಸ್ತ್ರಚಿಕಿತ್ಸೆಗಳನ್ನು ನಡೆಸಿರುವ ಇವರು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇತರ ವೈದ್ಯರಿಗೆ ತರಬೇತಿ ನೀಡುವ ಫ್ಯಾಕಲ್ಟಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿ ಗುಣಮುಖರಾಗುತ್ತಿದ್ದು, ಈ ಅಪರೂಪದ ಪ್ರಕರಣವನ್ನು ಜಾಗತಿಕ ವೈದ್ಯಕೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಡಾ. ಮರಜಕ್ಕೆ ಅವರ ಈ ಅಪಾರ ಪರಿಣತಿಯ ಹಿನ್ನೆಲೆಯಲ್ಲಿ, ಸಿದ್ಧಗಿರಿ ಆಸ್ಪತ್ರೆಯು ಸಂಕೀರ್ಣ ಬ್ರೈನ್ ಬೈಪಾಸ್ ಶಸ್ತ್ರಚಿಕಿತ್ಸೆಗಳಿಗಾಗಿ ಭಾರತದ ಅಗ್ರಗಣ್ಯ ಸಂಸ್ಥೆಯಾಗಿ ಹೊರಹೊಮ್ಮಿದೆ. ಇದನ್ನು ಗುರುತಿಸಿ, ಪ್ರತಿಷ್ಠಿತ *ನ್ಯೂ ರಾಲಜಿಕಲ್ ಸೊಸೈಟಿ ಆಫ್ ಇಂಡಿಯಾ (NSI)* ಸಂಸ್ಥೆಯು ಇದೇ *ಜೂನ್ 13–14, 2026* ರಂದು ರಾಷ್ಟ್ರೀಯ ಬ್ರೈನ್ ಬೈಪಾಸ್ ಶಸ್ತ್ರಚಿಕಿತ್ಸಾ ಕಾರ್ಯಾಗಾರವನ್ನು ಆಯೋಜಿಸುವ ಗೌರವವನ್ನು ಸಿದ್ಧಗಿರಿ ಆಸ್ಪತ್ರೆಗೆ ನೀಡಿದೆ. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಗ್ರಾಮೀಣ ಭಾಗದ ಧರ್ಮಾದಾಯ ಆಸ್ಪತ್ರೆಯೊಂದಕ್ಕೆ ಇಂತಹ ದೊಡ್ಡ ಜವಾಬ್ದಾರಿ ಸಿಕ್ಕಂತಾಗಿದೆ. ಈ ಕಾರ್ಯಾಗಾರದಲ್ಲಿ ದೇಶದ ಭವಿಷ್ಯದ ನರಶಸ್ತ್ರಚಿಕಿತ್ಸಕರಿಗೆ ಸುಧಾರಿತ ಬೈಪಾಸ್ ತಂತ್ರಗಳ ತರಬೇತಿ ನೀಡಲಾಗುತ್ತದೆ.
ಸಿದ್ಧಗಿರಿ ಆಸ್ಪತ್ರೆಯ OT ತಂಡದ ಅಪಾರ ತಾಳ್ಮೆ, ‘ಚಿಕಿತ್ಸೆಗಿಂತ ಮಿಗಿಲಾದ ಆರೈಕೆ’ ಮತ್ತು ‘ಕಾಯಕವೇ ಕೈಲಾಸ’ ಎಂಬ ಧ್ಯೇಯೋದ್ದೇಶಕ್ಕೆ ಈ ಜಾಗತಿಕ ಯಶಸ್ಸು ಸಾಕ್ಷಿಯಾಗಿದೆ. ಭವಿಷ್ಯದಲ್ಲಿ ಮೆದುಳಿನ ಕಾಯಿಲೆಗಳ ಚಿಕಿತ್ಸೆಗೆ ಈ ಸಾಧನೆ ಹೊಸ ದಿಕ್ಸೂಚಿಯಾಗಲಿದೆ.

Tags:

error: Content is protected !!