ಹಿರಿಯ ಮುತ್ಸದ್ದಿ ರಾಜಕಾರಣಿ ಎಚ್.ಕೆ. ಪಾಟೀಲ್ ಅವರನ್ನು ರಾಜ್ಯದ ನೂತನ ಸಚಿವ ಸಂಪುಟದಿಂದ ಹೊರಗಿಟ್ಟಿರುವುದಕ್ಕೆ ಗಡಿನಾಡು ಬೆಳಗಾವಿಯ ಕನ್ನಡ ಸಂಘಟನೆಗಳು ತೀವ್ರ ಆಘಾತ ಮತ್ತು ನಿರಾಸೆ ವ್ಯಕ್ತಪಡಿಸಿವೆ. ಸಂಪುಟ ವಿಸ್ತರಣೆಯ ಎರಡನೇ ಹಂತದಲ್ಲಾದರೂ ಅವರಿಗೆ ಮರು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ವತಿಯಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಹತ್ವದ ಮನವಿ ಸಲ್ಲಿಸಲಾಗಿದೆ.

ಸೈದ್ಧಾಂತಿಕ ನೆಲಗಟ್ಟಿನ ಹಿರಿಯ ನಾಯಕರಾದ ಎಚ್.ಕೆ. ಪಾಟೀಲ್ ಅವರನ್ನು ಸಂಪುಟದಿಂದ ದೂರವಿಟ್ಟಿರುವುದು ನಾಡಿನ ಪ್ರಜ್ಞಾವಂತ ನಾಗರಿಕರಿಗೆ ಹಾಗೂ ಗಡಿನಾಡು-ಹೊರನಾಡು ಕನ್ನಡಿಗರಿಗೆ ಭಾರಿ ಆಘಾತ ತಂದಿದೆ ಎಂದು ಕ್ರಿಯಾ ಸಮಿತಿ ತಿಳಿಸಿದೆ. ಈ ಹಿಂದೆ ಗಡಿ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಎಚ್.ಕೆ. ಪಾಟೀಲ್ ಅವರು ನಾಡು, ನುಡಿ ಮತ್ತು ಗಡಿಯ ಸಮಸ್ಯೆಗಳ ಬಗ್ಗೆ ಆಳವಾದ ಅಧ್ಯಯನ ಹೊಂದಿದ್ದಾರೆ. ಬೆಳಗಾವಿ ಗಡಿ ಭಾಗದ ಕನ್ನಡ ಸಂಘಟನೆಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಅವರು, ರಾಜ್ಯ ರಚನೆಯಾಗಿ 70 ವರ್ಷಗಳ ನಂತರವೂ ಕನ್ನಡ ಶಾಲೆಗಳಿಲ್ಲದ ಗ್ರಾಮಗಳಿಗೆ ಶಾಲೆಗಳನ್ನು ಮಂಜೂರು ಮಾಡಿಕೊಟ್ಟಿದ್ದರು. ಅಲ್ಲದೆ, ಇತಿಹಾಸದಲ್ಲೇ ಮೊದಲ ಬಾರಿಗೆ ಬೆಳಗಾವಿ ಕರ್ನಾಟಕ ರಾಜ್ಯೋತ್ಸವ ಆಚರಣೆಗಾಗಿ ತಮ್ಮ ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿ ಗಡಿನಾಡಿನಲ್ಲಿ ಕನ್ನಡ ಡಿಂಡಿಮ ಮೊಳಗಲು ಕಾರಣರಾಗಿದ್ದರು ಎಂದು ಸಮಿತಿ ನೆನಪಿಸಿಕೊಂಡಿದೆ.ಎಚ್.ಕೆ. ಪಾಟೀಲ್ ಅವರ ತಂದೆ, ‘ಹುಲಕೋಟಿ ಹುಲಿ’ ಎಂದೇ ಖ್ಯಾತರಾಗಿದ್ದ ದಿವಂಗತ ಕೆ.ಎಚ್. ಪಾಟೀಲ್ ಅವರು ಕೂಡ 1973 ರಲ್ಲಿ ದೇವರಾಜ ಅರಸು ಸಂಪುಟದಲ್ಲಿ ಗಡಿ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಂತಹ ಮಹಾನ್ ನಾಯಕರ ಪುತ್ರರಾದ ಎಚ್.ಕೆ. ಪಾಟೀಲ್ ಅವರನ್ನು ಸಂಪುಟದಿಂದ ಹೊರಗಿಟ್ಟಿರುವುದು ಇಡೀ ರಾಜ್ಯಕ್ಕೆ ತಪ್ಪು ಸಂದೇಶ ರವಾನಿಸಿದಂತಾಗಿದೆ. ಗಡಿನಾಡಿನ ಹಿತಾಸಕ್ತಿ ಕಾಯಲು ಮತ್ತು ಸೈದ್ಧಾಂತಿಕ ರಾಜಕಾರಣವನ್ನು ಜೀವಂತವಾಗಿಡಲು ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ತಕ್ಷಣವೇ ಎಚ್ಚೆತ್ತುಕೊಳ್ಳಬೇಕು. ಮುಂಬರುವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಎಚ್.ಕೆ. ಪಾಟೀಲ್ ಅವರನ್ನು ಮರು ಸೇರ್ಪಡೆ ಮಾಡಿಕೊಂಡು ಗಡಿನಾಡಿನ ಕನ್ನಡಿಗರಿಗೆ ನ್ಯಾಯ ಒದಗಿಸಬೇಕು ಎಂದು ಕನ್ನಡ ಹೋರಾಟಗಾರ ಅಶೋಕ್ ಚಂದರಗಿ ನೇತೃತ್ವದ ಕ್ರಿಯಾ ಸಮಿತಿ ಕಳಕಳಿಯ ಮನವಿ ಮಾಡಿದೆ. ಈ ಸಂದರ್ಭದಲ್ಲಿ ಮಹಾದೇವ ತಳವಾರ, ಬಲರಾಮ ಮಾಸೇನಟ್ಟಿ, ಅಶೋಕ ಚಂದರಗಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

