ಚಿಕ್ಕೋಡಿ:ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿ ಸೇವೆ ಸಲ್ಲಿಸುತ್ತಿರುವ ಎಂಎಲ್ಸಿ ಪ್ರಕಾಶ ಹುಕ್ಕೇರಿ ಅಥವಾ ಶಾಸಕ ಗಣೇಶ ಹುಕ್ಕೇರಿ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದರು.

ಚಿಕ್ಕೋಡಿ ಪ್ರವಾಸಿ ಮಂದಿರದಿಂದ ಆರಂಭಗೊಂಡ ಕಾಂಗ್ರೆಸ್ ಕಾರ್ಯಕರ್ತರ ಪಾದಯಾತ್ರೆಯು ಪ್ರಮುಖ ರಸ್ತೆಗಳ ಮೂಲಕ ಬಸವ ವೃತ್ತದವರೆಗೆ ಸಾಗಿತು. ಬಸವ ವೃತ್ತದಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿ, ಮಾನವ ಸರಪಳಿ ನಿರ್ಮಿಸಿ ಹುಕ್ಕೇರಿ ತಂದೆ ಅಥವಾ ಮಗನಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.

ಇದೇ ಸಮಯದಲ್ಲಿ ಕಾಂಗ್ರೆಸ್ ಮುಖಂಡರಾದ ರವಿ ಮಿರ್ಜೆ ಮತ್ತು ಅನಿಲ ಪಾಟೀಲ ಮಾತನಾಡಿ ಪ್ರಕಾಶ ಹುಕ್ಕೇರಿ ಅವರು ಕಳೆದ 40 ವರ್ಷಗಳಿಂದ ಪಕ್ಷದ ಏಳು-ಬೀಳುಗಳಲ್ಲಿ ನಿಷ್ಠಾವಂತರಾಗಿ ಸೇವೆ ಸಲ್ಲಿಸಿದ್ದಾರೆ. ಚಿಕ್ಕೋಡಿ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಹುಕ್ಕೇರಿ ಕುಟುಂಬದ ಶ್ರಮ ಅಪಾರವಾಗಿದೆ. ಹೀಗಾಗಿ ಹಿರಿಯರಾದ ಪ್ರಕಾಶ ಹುಕ್ಕೇರಿ ಅಥವಾ ಯುವ ನಾಯಕ ಗಣೇಶ ಹುಕ್ಕೇರಿ ಅವರಿಗೆ ತಕ್ಷಣವೇ ಸಚಿವ ಸ್ಥಾನ ನೀಡಬೇಕು” ಎಂದು ಹಿರಿಯ ನಾಯಕರನ್ನು ಆಗ್ರಹಿಸಿದರು.
ಸ್ಥಳೀಯ ನಾಯಕರ ಸಮ್ಮುಖದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಪಾಟೀಲ ಹಾಗೂ ಅನಿಲ ಪಾಟೀಲ್ ಅವರ ಮುಖಾಂತರ ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ (AICC) ತಮ್ಮ ನ್ಯಾಯಯುತ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಲ್ಲಿಸಲಾಯಿತು.
