Chikkodi

ಮಹಾರಾಷ್ಟ್ರದ ಕೊಯ್ನಾ ಜಲಾಶಯ ಖಾಲಿ ಖಾಲಿ: ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿನ ಭೀತಿ

Share

ಉತ್ತರ ಕರ್ನಾಟಕದ ಜಿಲ್ಲೆಗಳ ಜೀವನಾಡಿಯಾಗಿರುವ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪ್ರಸಿದ್ಧ ಕೊಯ್ನಾ ಜಲಾಶಯದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಬರೋಬ್ಬರಿ 105 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಬೃಹತ್ ಜಲಾಶಯದಲ್ಲಿ ಸದ್ಯ ಕೇವಲ 15 ಟಿಎಂಸಿ ನೀರು ಮಾತ್ರ ಉಳಿದುಕೊಂಡಿದ್ದು, ಜಲಾಶಯ ಸಂಪೂರ್ಣ ಖಾಲಿ ಖಾಲಿಯಾಗಿದೆ.

ಈ ಆತಂಕಕಾರಿ ಬೆಳವಣಿಗೆಯು ಕೃಷ್ಣಾ ನದಿ ಪಾತ್ರದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತತ್ವಾರ ಸೃಷ್ಟಿಸುವ ಭೀತಿ ಮೂಡಿಸಿದೆ.
ಕೊಯ್ನಾ ಜಲಾಶಯದಿಂದ ಬಿಡುಗಡೆಯಾಗುವ ನೀರು ನೇರವಾಗಿ ಕೃಷ್ಣಾ ನದಿ ಹಾಗೂ ಅದರ ಉಪನದಿಗಳ ಮೂಲಕ ಕರ್ನಾಟಕವನ್ನು ಪ್ರವೇಶಿಸುತ್ತದೆ. ಈ ನೀರು ಪ್ರಮುಖವಾಗಿ ಬೆಳಗಾವಿ,ವಿಜಾಪುರ,ಬಾಗಲಕೋಟೆ ಸೇರಿದಂತೆ ವಿವಿಧ ಭಾಗಗಳ ಲಕ್ಷಾಂತರ ಜನರ ದಾಹ ನೀಗಿಸುತ್ತದೆ.

ಪ್ರತಿ ವರ್ಷ ಬೇಸಿಗೆಯ ಅವಧಿಯಲ್ಲಿ ಅಥವಾ ಮುಂಗಾರು ತಡವಾದಾಗ, ಉತ್ತರ ಕರ್ನಾಟಕದ ಈ ಭಾಗಗಳಲ್ಲಿ ನದಿಗಳು ಒಣಗಿ ಕುಡಿಯುವ ನೀರಿಗೆ ತತ್ವಾರ ಉಂಟಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಕರ್ನಾಟಕ ಸರ್ಕಾರವು ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡಿಸಿಕೊಳ್ಳುತ್ತಿತ್ತು. ಆದರೆ ಈ ಬಾರಿ ಕೊಯ್ನಾದಲ್ಲೇ ಕೇವಲ 15 ಟಿಎಂಸಿ ನೀರು ಇರುವುದರಿಂದ ಮಹಾರಾಷ್ಟ್ರದಿಂದ ನೀರು ಹರಿದು ಬರುವುದು ಅನುಮಾನ ಎನ್ನಲಾಗಿದೆ.

ಇದರಿಂದಾಗಿ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ನದಿ ತೀರದ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ
ಎದುರಾಗುವ ಸಾಧ್ಯತೆ ದಟ್ಟವಾಗಿದೆ.

Tags:

error: Content is protected !!