Chikkodi

ಸಾಧಕ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ

Share

ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಆನಂದ ಕೋಳಿ ಅವರ ನಿವೃತ್ತಿ ಬೀಳ್ಕೊಡುಗೆ, ಸಾಧಕ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರು, “ಮಜಲಟ್ಟಿ ಸರಕಾರಿ ಪಿಯು ಕಾಲೇಜು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಇಲ್ಲಿನ ಉಪನ್ಯಾಸಕರು ಮತ್ತು ಸಿಬ್ಬಂದಿಯ ನಿರಂತರ ಶ್ರಮದಿಂದಾಗಿ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಮುಂದಿನ ವರ್ಷವೂ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವುದಾಗಿ” ಭರವಸೆ ನೀಡಿದರು.

ನಿವೃತ್ತ ಪ್ರಾಚಾರ್ಯ ಆನಂದ ಕೋಳಿ ಮಾತನಾಡಿ, “ಸಹೋದ್ಯೋಗಿಗಳ ಸಹಕಾರದಿಂದಾಗಿ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಯಿತು. ವೃತ್ತಿಯಿಂದ ನಿವೃತ್ತನಾದರೂ ಕಾಲೇಜಿಗೆ ಸ್ವಯಂಪ್ರೇರಿತನಾಗಿ ಸೇವೆ ಸಲ್ಲಿಸಲು ಸದಾ ಸಿದ್ಧ” ಎಂದರು. ಇದೇ ಸಂದರ್ಭದಲ್ಲಿ ಆನಂದ ಕೋಳಿ ಹಾಗೂ ಅವರ ಧರ್ಮಪತ್ನಿ ಕಲಾವತಿ ಕೋಳಿ ದಂಪತಿಯನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ಪ್ರಾಚಾರ್ಯ ವಿಶ್ವನಾಥ ಚೌಗಲಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಡಿಡಿಪಿಯು ಪಾಂಡುರಂಗ ಭಂಡಾರಿ, ಜಿ.ಪಂ. ಮಾಜಿ ಸದಸ್ಯ ಮಹೇಶ ಭಾತೆ, ಸುಜಾತ ಪಾಟೀಲ, ಪ್ರಭಾರಿ ಡಿಡಿಪಿಯು ಬಸವರಾಜ ಹಾದಿಮನಿ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಎ.ಕುಂಬಾರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಜಿ.ಆರ್. ಬಿರಾದಾರ ಸ್ವಾಗತಿಸಿದರು, ರವೀಂದ್ರ ಕಾಗಲೆ ಪ್ರಾಸ್ತಾವಿಕವಾಗಿ ಮಾತನಾಡಿದರು ಹಾಗೂ ಹಣಮಂತ ಠಕ್ಕನವರ ಕಾರ್ಯಕ್ರಮ ನಿರೂಪಿಸಿದರು.

Tags:

error: Content is protected !!