ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಡೆಯುತ್ತಿರುವ ಚರಂಡಿ ಹಾಗೂ ಫುಟ್ಪಾತ್ ಕಾಮಗಾರಿಗಳು ಅತ್ಯಂತ ಮಂದಗತಿಯಲ್ಲಿ ಸಾಗುತ್ತಿರುವುದನ್ನು ಖಂಡಿಸಿ, ಸ್ಥಳೀಯ ವ್ಯಾಪಾರಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ವಿಳಂಬದಿಂದಾಗಿ ಬೇಸತ್ತ ವ್ಯಾಪಾರಿಗಳು ಕಳೆದ ಕೆಲವು ದಿನಗಳಿಂದ ತಮ್ಮ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಆಕ್ರೋಶವನ್ನು ಹೊರಹಾಕಿದ್ದಾರೆ.

ಚಿಕ್ಕೋಡಿ ಪಟ್ಟಣದ ಬಸವ ವೃತ್ತದಿಂದ ಹಾಲಟ್ಟಿ ರಸ್ತೆಯವರೆಗೆ ರಸ್ತೆ, ಚರಂಡಿ ಹಾಗೂ ಫುಟ್ಪಾತ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲೂ ವಿಶೇಷವಾಗಿ ನಗರದ ಕೋರ್ಟ್ ಹಾಗೂ ಐ.ಬಿ. ಎದುರಿನ ಭಾಗದಲ್ಲಿ ಕಾಮಗಾರಿ ಅಪೂರ್ಣಗೊಂಡು ಅರ್ಧಕ್ಕೆ ನಿಂತಿದೆ.ಅರ್ಧಕ್ಕೆ ನಿಂತಿರುವ ಚರಂಡಿಗಳಿಂದಾಗಿ ರಸ್ತೆಯುದ್ದಕ್ಕೂ ಕೊಳಚೆ ನೀರು ನಿಂತು ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.ನಿಂತ ನೀರಿನಿಂದಾಗಿ ಇಡೀ ಪ್ರದೇಶದಲ್ಲಿ ತೀವ್ರ ದುರ್ವಾಸನೆ ಹರಡುತ್ತಿದ್ದು, ಸಾರ್ವಜನಿಕರು ಹಾಗೂ ಗ್ರಾಹಕರು ಈ ರಸ್ತೆಯಲ್ಲಿ ಓಡಾಡಲು ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.ದುರ್ವಾಸನೆ ಹಾಗೂ ರಸ್ತೆ ಅಗೆದಿರುವ ಕಾರಣ ಗ್ರಾಹಕರು ಅಂಗಡಿಗಳತ್ತ ಸುಳಿಯುತ್ತಿಲ್ಲ. ಇದರಿಂದಾಗಿ ಇಡೀ ಭಾಗದಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಕಳೆದ ಹಲವು ದಿನಗಳಿಂದ ಕಾಮಗಾರಿ ನೆಪದಲ್ಲಿ ರಸ್ತೆ ಅಗೆದು ಹಾಕಲಾಗಿದೆ. ಇದರಿಂದ ನಮಗೆ ವ್ಯಾಪಾರವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಅಧಿಕಾರಿಗಳ ಮತ್ತು ಗುತ್ತಿಗೆದಾರರ ಬೇಜವಾಬ್ದಾರಿತನದಿಂದಾಗಿ ನಾವು ಅಂಗಡಿಗಳನ್ನು ಬಂದ್ ಮಾಡಬೇಕಾಗಿ ಬಂದಿದೆ ಎಂದು ಸ್ಥಳೀಯ ವ್ಯಾಪಾರಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕಾಮಗಾರಿಯನ್ನು ಇಷ್ಟೊಂದು ಮಂದಗತಿಯಲ್ಲಿ ನಡೆಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲೂ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಮುತವರ್ಜಿವಹಿಸಿ ಕಾಮಗಾರಿಯನ್ನು ವೀಕ್ಷಿಸಿ ಗುತ್ತಿಗೆದಾರಿಗೆ ಸೂಚನೆ ನೀಡಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಹಾಗೂ ವ್ಯಾಪಾರಸ್ಥರ ಸಂಕಷ್ಟಕ್ಕೆ ಮುಕ್ತಿ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
