ಆತ ತನ್ನಷ್ಟಕ್ಕೆ ತಾನು ಕಬ್ಬಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ, ಬೈಕ್ ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು, ಏಕಾ ಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಒಂದು ಗುಂಡು ಆತನಿಗೆ ತಗುಲಿದ್ದು ಆತ ಸಾವನಪ್ಪಿರಬಹುದು ಎಂದು ಅಲ್ಲಿಂದ ಕಾಲ್ ಕಿತ್ತಿದ್ದಾರೆ. ಹಾಗಾದರೆ ಈ ಘಟನೆಗೆ ಕಾರಣವಾದರೂ ಏನು ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್…

ಹೌದು ವಿಜಯಪುರ ಜಿಲ್ಲೆಯ ಇಟ್ಟಂಗಿಹಾಳ ಗ್ರಾಮದಲ್ಲಿ ಕಬ್ಬಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಆತ ಸಾವನಪ್ಪಿರಬಹುದು ಎಂದು ಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ವಿಜಯಪುರ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ನಿವಾಸಿಯಾದ 30ವರ್ಷದ ದಯವಂತ್ ಡೇರೆ ಎಂಬುವವರು ತಮ್ಮ ಕಬ್ಬಿನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಮುಖಕ್ಕೆ ಮುಸುಕು ಧರಿಸಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು, ದಯಾವಂತ್ ಅವರ ಹಿಂಬದಿಯಿಂದ ದಿಢೀರ್ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದಾಳಿಯ ವೇಳೆ ದಯವಂತ್ ಅವರ ಕೈಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ದಯವಂತನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ…

ಇನ್ನೂ ಈ ದಾಳಿಯ ಹಿಂದೆ ಹಳೆಯ ವೈಷಮ್ಯ ಇರುವ ಶಂಕೆ ವ್ಯಕ್ತವಾಗಿದೆ. ಸುಮಾರು ಒಂದು ವರ್ಷದ ಹಿಂದೆ ಒಟ್ಟು ಆರು ಜನರೊಂದಿಗೆ ದಯಾವಂತ್ ಅವರಿಗೆ ಗಲಾಟೆಯಾಗಿದ್ದು, ವೈಷಮ್ಯ ಬೆಳೆದಿತ್ತು ಎನ್ನಲಾಗಿದೆ. ಅದೇ ಹಿನ್ನೆಲೆಯಲ್ಲಿ ಆ ಆರು ಜನರೇ ಸೇರಿಕೊಂಡು ಈ ಇಬ್ಬರು ಮುಸುಕುಧಾರಿಗಳನ್ನು ಕಳುಹಿಸಿ ತಮ್ಮ ಮೇಲೆ ದಾಳಿ ಮಾಡಿಸಿದ್ದಾರೆ ಎಂದು ಸಂತ್ರಸ್ತರು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ವಿಜಯಪುರ ಗ್ರಾಮೀಣ ಠಾಣೆಯ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಸ್ಥಳೀಯ ಪೊಲೀಸ್ ತನಿಖಾ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪ್ರಕರಣ ಗಂಭೀರವಾಗಿ ಪರಿಗಣಿಸಿದ ವಿಜಯಪುರ ಎಸ್ ಪಿ ಲಕ್ಷ್ಮಣ್ ನಿಂಬರಗಿ, ತನಿಖಾ ತಂಡ ರಚಿಸಿದ್ದಾರೆ. ಸದ್ಯ ಪ್ರಕರಣವು ತನಿಖೆಯ ಹಂತದಲ್ಲಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ…
ಸದ್ಯ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆರೋಪಿಗಳ ಬಂಧಿಸಿದ ಬಳಿಕ ಗುಂಡಿನ ದಾಳಿಗೆ ನಿಖರ ಕಾರಣ ಬಯಲಿಗೆ ಬರಲಿದೆ…
