ಬೆಳಗಾವಿಯ ಹಳೆಯ ಮಹಾನಗರ ಪಾಲಿಕೆ ಕಟ್ಟಡದ ಬಳಿ ಆಶ್ರಯ ಪಡೆದಿದ್ದ ಅನಾಥ ರೋಗಿಯೊಬ್ಬರಿಗೆ ಸಿವಿಲ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡದೆ ಹೊರಕಳುಹಿಸಿದ ವೈದ್ಯರ ಬೇಜವಾಬ್ದಾರಿಯನ್ನು ಖಂಡಿಸಿ ಸಮಾಜ ಸೇವಕರು ಭಾರಿ ಪ್ರತಿಭಟನೆ ನಡೆಸಿದ್ದಾರೆ.

ಬೆಳಗಾವಿಯ ಹಳೆಯ ಮಹಾನಗರ ಪಾಲಿಕೆ ಕಟ್ಟಡದ ಬಳಿ ಆಶ್ರಯ ಪಡೆದಿದ್ದ ಅರ್ಜುನ್ ತಾರಿಹಾಳ್ ಎಂಬ ಅನಾಥ ರೋಗಿಯನ್ನು ಸಮಾಜ ಸೇವಕರು ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆಸ್ಪತ್ರೆಯ ವೈದ್ಯರು ಹಾಗೂ ಆಡಳಿತ ಮಂಡಳಿಯು ಸರಿಯಾದ ಡೈಗ್ನೋಸಿಸ್ ಕೂಡ ಮಾಡದೆ, ಚಿಕಿತ್ಸೆಯನ್ನೂ ಪೂರ್ಣಗೊಳಿಸದೆ ಎರಡು ತಿಂಗಳ ಬಳಿಕ ಅವರನ್ನು ಆಸ್ಪತ್ರೆಯಿಂದ ಹೊರಕಳುಹಿಸಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸಾಮಾಜಿಕ ಕಾರ್ಯಕರ್ತ ಶಂಕರ್ ಪಾಟೀಲ್ ನೇತೃತ್ವದಲ್ಲಿ ಆಸ್ಪತ್ರೆಯ ಎದುರು ಭಾರಿ ಆಕ್ರೋಶ ವ್ಯಕ್ತಪಡಿಸಲಾಯಿತು. ಘಟನೆ ಸಂಬಂಧ ಜಿಲ್ಲಾಧಿಕಾರಿಗಳು, ಡಿಎಚ್ಒ ಹಾಗೂ ಟಿಎಚ್ಒ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದರೂ ಯಾರೂ ಜವಾಬ್ದಾರಿ ವಹಿಸಿಕೊಳ್ಳಲು ಮುಂದಾಗಲಿಲ್ಲ ಎಂದು ನಗರಸೇವಕ ಶಂಕರ್ ಪಾಟೀಲ್ ತೀವ್ರ ಬೇಸರ ವ್ಯಕ್ತಪಡಿಸಿದರು.
ಸಾರ್ವಜನಿಕರು ಅಥವಾ ಸಮಾಜ ಸೇವಕರು ರಸ್ತೆ ಬದಿಯಲ್ಲಿ ಸಿಗುವ ಅನಾಥ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿದರೆ, ಅಲ್ಲಿ ಅವರಿಗೆ ಸರಿಯಾದ ಆರೈಕೆ ಸಿಗುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೇವಲ ಎರಡು-ಮೂರು ದಿನಗಳಲ್ಲಿ ಮಾತ್ರೆ-ಇಂಜೆಕ್ಷನ್ ನೀಡಿ, ರೋಗಿಗಳು ಪೂರ್ಣ ಗುಣಮುಖರಾಗುವ ಮುನ್ನವೇ ಡಿಸ್ಚಾರ್ಜ್ ಮಾಡಿ ಕಳುಹಿಸಲಾಗುತ್ತಿದೆ. ನಗರದ ರಸ್ತೆ ಹಾಗೂ ಕಚೇರಿಗಳ ಬಳಿ ಆಶ್ರಯ ಪಡೆಯುವ ಅನಾಥರಿಗೆ ಸೂಕ್ತ ಆರೈಕೆ ನೀಡುವುದು ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತದ ಕರ್ತವ್ಯವಾಗಿದ್ದು, ಆಸ್ಪತ್ರೆ ಸಿಬ್ಬಂದಿಯ ಈ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಪ್ರತಿಭಟನಾಕಾರರು ನ್ಯಾಯಕ್ಕಾಗಿ ಆಗ್ರಹಿಸಿದರು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಶೋಕ್ ಕುಮಾರ್ ಶೆಟ್ಟಿ, ರೋಗಿಗೆ ನರ ದೌರ್ಬಲ್ಯವಿದ್ದು, ನ್ಯೂರೋ ಸರ್ಜನ್ ಮೂಲಕ ಮುಂದಿನ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ, ಅನಾರೋಗ್ಯದ ನಡುವೆಯೂ ರೋಗಿಯನ್ನು ಯಾರು ಡಿಸ್ಚಾರ್ಜ್ ಮಾಡಿದ್ದಾರೆ ಎಂಬುದರ ಕುರಿತು ಕೇಸ್ ಪೇಪರ್ ಪರಿಶೀಲಿಸಿ, ತಪ್ಪಿತಸ್ಥ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ರೋಗಿಗೆ ಸಂಪೂರ್ಣ ಗುಣಮುಖವಾಗುವವರೆಗೆ ಚಿಕಿತ್ಸೆ ಮತ್ತು ಆರೈಕೆಯ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ವೈದ್ಯಾಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
