bagalkot

ಬಾಗಲಕೋಟೆ: ಜೆ.ಕೆ. ಸಿಮೆಂಟ್ AFR ಘಟಕ ಸ್ಥಗಿತಕ್ಕೆ ಒತ್ತಾಯ: ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಬೃಹತ್ ಪ್ರತಿಭಟನೆ

Share

ಬಾಗಲಕೋಟೆಯಲ್ಲಿ ರೈತರ ಆಕ್ರೋಶ ಮುಗಿಲು ಮುಟ್ಟಿದೆ. ಲೋಕಾಪುರ ಬಳಿಯ ಮುದ್ದಾಪುರದಲ್ಲಿರುವ ಜೆ.ಕೆ. ಸಿಮೆಂಟ್‌ನ AFR ಘಟಕವನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಒತ್ತಾಯಿಸಿ, ನೂರಾರು ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಲೋಕಾಪುರ ಸಮೀಪದ ಮುದ್ದಾಪುರದಲ್ಲಿರುವ ಜೆ.ಕೆ. ಸಿಮೆಂಟ್ ಘಟಕದಲ್ಲಿ ಪ್ಲಾಸ್ಟಿಕ್ ಹಾಗೂ ಅಪಾಯಕಾರಿ ತ್ಯಾಜ್ಯವನ್ನು ಇಂಧನವಾಗಿ ಬಳಸಲಾಗುತ್ತಿದೆ ಎಂದು ರೈತರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ವಾಯು ಮಾಲಿನ್ಯ, ದುರ್ವಾಸನೆ ಹಾಗೂ ಹೊಗೆ ಆವರಿಸುತ್ತಿದ್ದು, ಕೃಷಿ ಜಮೀನು, ಬೆಳೆಗಳು, ಜಾನುವಾರುಗಳು ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತಿದೆ. ಈ ಘಟಕದಿಂದ ಉಂಟಾಗುತ್ತಿರುವ ಮಾಲಿನ್ಯವನ್ನು ತಡೆಯಲು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ರೈತರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಈ ಹಿಂದೆ ಸ್ವತಃ ಜಿಲ್ಲಾಧಿಕಾರಿಗಳೇ ಮಧ್ಯಸ್ಥಿಕೆ ವಹಿಸಿ AFR ಬಳಕೆಯ ಕುರಿತು ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಭರವಸೆ ನೀಡಿ ಹಲವು ದಿನಗಳಾಗಿದ್ದರೂ ಇದುವರೆಗೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವುದಕ್ಕೆ ಪ್ರತಿಭಟನಾಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ AFR ಪರವಾನಗಿಯನ್ನು ಮರುಪರಿಶೀಲಿಸಬೇಕು, ನಿಯಮ ಉಲ್ಲಂಘನೆ ಕಂಡುಬಂದರೆ ಕಾನೂನು ಕ್ರಮ ಜರುಗಿಸಿ ಘಟಕವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಪರಿಸರ ಸಂರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

Tags:

error: Content is protected !!