ಬೆಳಗಾವಿಯಲ್ಲಿ ‘ವಿಬಿ-ಜಿ ರಾಮ್ ಜಿ’ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತೀವ್ರ ಆಡಳಿತಾತ್ಮಕ ಗೊಂದಲ ಎದುರಿಸುತ್ತಿದ್ದಾರೆ. ಯೋಜನೆಯ ಕಾಮಗಾರಿಗಳ ಕುರಿತು ಸ್ಪಷ್ಟತೆ ಇಲ್ಲದಿರುವುದರಿಂದ ತಕ್ಷಣವೇ ಮಾರ್ಗಸೂಚಿ ಹಾಗೂ ಸುತ್ತೋಲೆ ಹೊರಡಿಸುವಂತೆ ಪಿಡಿಒಗಳ ಸಂಘದಿಂದ ತಾಲ್ಲೂಕು ಪಂಚಾಯಿತಿ ಇಒಗೆ ಮನವಿ ಸಲ್ಲಿಸಲಾಗಿದೆ.

ಪ್ರಸ್ತುತ ಜಾರಿಯಲ್ಲಿರುವ ‘ವಿಬಿ-ಜಿ ರಾಮ್ ಜಿ’ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ನಿಯಮಾವಳಿಗಳಲ್ಲಿ ಅಸ್ಪಷ್ಟತೆ ಕಂಡುಬಂದಿದೆ. ಇದರಿಂದಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಲು ಪಿಡಿಒಗಳಿಗೆ ತೀವ್ರ ಆಡಳಿತಾತ್ಮಕ ತೊಡಕು ಉಂಟಾಗಿದ್ದು, ಅಭಿವೃದ್ಧಿ ಕೆಲಸಗಳು ವಿಳಂಬವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪಿಡಿಒ ‘ಬಿ’ ಗ್ರೇಡ್ ಹುದ್ದೆ ಉನ್ನತೀಕರಣ ಸಂಘದ ಬೆಳಗಾವಿ ತಾಲ್ಲೂಕು ಘಟಕದ ವತಿಯಿಂದ ಬೆಳಗಾವಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಯಶವಂತ ಕುಮಾರ ಅವರಿಗೆ ಸೋಮವಾರ ಅಧಿಕೃತ ಮನವಿ ಸಲ್ಲಿಸಲಾಯಿತು. ಮನವಿ ಸಲ್ಲಿಕೆ ವೇಳೆ ಪಿಡಿಒಗಳಾದ ರವಿಕಾಂತ್ ಸಿ.ಎಂ, ಗೋಪಾಲ ಗುಡಸಿ, ಹನಮಂತ ಪೋಳ, ಶ್ರೀಧರ ಸರದಾರ, ಲೀಲಾ ಮೇತ್ರಿ, ಸುಮಿತ್ರಾ ಮಿರ್ಜಿ, ಶ್ಯಾಮಲಾ ಪೂಜಾರಿ ಹಾಗೂ ಆಶಾ ಎಸ್ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.
