ಬೆಳಗಾವಿಯಲ್ಲಿ ‘ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ’ ಹಾಗೂ ಶ್ರೀ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನದ ವತಿಯಿಂದ ಕಳೆದ ಎಂಟು ದಿನಗಳಿಂದ ಜಾತಿನಾತಿ ಭೇದವಿಲ್ಲದೆ ಅರ್ಚಕರಿಗೆ ಹಮ್ಮಿಕೊಳ್ಳಲಾಗಿದ್ದ ಉಚಿತ ತರಬೇತಿ ಶಿಬಿರ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಭವ್ಯ ಶೋಭಾಯಾತ್ರೆ ಹಾಗೂ ಸಂಕೀರ್ತನ ಯಾತ್ರೆ ಜರುಗಿತು.
ಸಮಾರೋಪದ ಭಾಗವಾಗಿ ಶಹಾಪುರದ ಬ್ಯಾರಿಸ್ಟರ್ ನಾಥ್ ಪೈ ಸರ್ಕಲ್, ಖಡೇ ಬಝಾರ್, ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ರಸ್ತೆ ಮಾರ್ಗವಾಗಿ ಶೋಭಾಯಾತ್ರೆ ಸಂಚರಿಸಿತು. ಬಳಿಕ ಛತ್ರಪತಿ ಶಿವಾಜಿ ಮಹಾರಾಜ್ ಉದ್ಯಾನವನಕ್ಕೆ ಭೇಟಿ ನೀಡಿ, ಶಿವಾಜಿ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಲಾಯಿತು.


ಬೆಳಗಾವಿಯ ಶ್ರೀ ಹಿರೇಮಠ ಹುಕ್ಕೇರಿ ಸಂಸ್ಥಾನ ಮಠದಲ್ಲಿ ಆಯೋಜಿಸಲಾಗಿದ್ದ ಸಮಾರೋಪ ಕಾರ್ಯಕ್ರಮದ ಕುರಿತು ಮಾತನಾಡಿದ ಸಮಿತಿಯ ರಾಜ್ಯ ಪ್ರಚಾರಕ ಮನೋಹರ್ ಮಠದ್, ದೇವಾಲಯಗಳು ಕೇವಲ ಧಾರ್ಮಿಕ ಕೇಂದ್ರಗಳಾಗದೆ ಭಕ್ತಿ, ಶಕ್ತಿ, ಅನ್ನ, ವಿದ್ಯಾ ಮತ್ತು ಸಂಸ್ಕಾರ ನೀಡುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವಾ ಕೇಂದ್ರಗಳಾಗಬೇಕು ಎಂಬ ‘ಗುಡಿ ಜನರ ಜೀವನಾಡಿ’ ಪರಿಕಲ್ಪನೆಯೊಂದಿಗೆ ಈ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ನಂತರ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಶ್ರೀ ಕ್ಷೇತ್ರ ಕಪಿಲೇಶ್ವರ ದೇವಾಲಯಕ್ಕೆ ತಲುಪಿ ಸಂಕೀರ್ತನ ಯಾತ್ರೆ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಸೋಮಶೇಖರ್ ಹಿರೇಮಠ, ಸತೀಶ್ ಮಾಳವದೆ, ಶಂಕ್ರಯ್ಯಾ ಶಾಸ್ತ್ರೀ, ಬಸವರಾಜ್ ಗಾಣಗಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಬೆಳಗಾವಿ, ಚಿಕ್ಕೋಡಿ ಹಾಗೂ ವಿಜಯಪುರ ಜಿಲ್ಲೆಗಳ ವಿವಿಧ ವರ್ಗದ ಅರ್ಚಕರು ಪಾಲ್ಗೊಂಡು ತರಬೇತಿ ಪಡೆದಿದ್ದಾರೆ.
