ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಗ್ರಾಮೀಣ ಭಾಗದಲ್ಲಿ ಎಲ್ಪಿಜಿ ಸಿಲಿಂಡರ್ ಅಭಾವ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಸರ್ಕಾರ ಗೃಹಬಳಕೆ ಸಿಲಿಂಡರ್ ಕೊರತೆಯಿಲ್ಲ ಎಂದು ಹೇಳುತ್ತಿದ್ದರೂ, ವಾಸ್ತವದಲ್ಲಿ ಮಾತ್ರ ಜನ ಸಾಮಾನ್ಯರು ಒಂದು ಸಿಲಿಂಡರ್ಗಾಗಿ ಇಡೀ ದಿನ ಕ್ಯೂ ನಿಲ್ಲುವ ಪರಿಸ್ಥಿತಿ ಎದುರಾಗಿದೆ.


ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಸಿಲಿಂಡರ್ ಗ್ಯಾಸ್ ಕೊರತೆ ಎದ್ದುಕಾಣುತ್ತಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಶೇಷವಾಗಿ ಲೋಕಾಪುರ ಭಾಗದಲ್ಲಿ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದ್ದು, ಗ್ಯಾಸ್ ಏಜೆನ್ಸಿಗಳ ಮುಂದೆ ನೂರಾರು ಗ್ರಾಹಕರು ಬೆಳ್ಳಂಬೆಳಗ್ಗೆಯೇ ಖಾಲಿ ಸಿಲಿಂಡರ್ ಹಿಡಿದು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಕಳೆದ ಎಂಟು ದಿನಗಳಿಂದ ಈ ಭಾಗಕ್ಕೆ ಸರಿಯಾಗಿ ಗ್ಯಾಸ್ ಲೋಡ್ ಬಂದಿರಲಿಲ್ಲ ಎನ್ನಲಾಗಿದ್ದು, ಇಂದು ಮುಂಜಾನೆ ಲೋಡ್ ಬರುತ್ತಿದ್ದಂತೆ ಜನ ಮುಗಿಬಿದ್ದಿದ್ದಾರೆ. ಲೋಕಾಪುರ ಬಳಿ ಇರುವ ಭಾರತ ಗ್ಯಾಸ್ ಏಜೆನ್ಸಿ ಗೋಡೌನ್ ಎದುರು ನೂರಾರು ಮಹಿಳೆಯರು ಹಾಗೂ ಸಾರ್ವಜನಿಕರು ಕ್ಯೂ ನಿಂತಿರುವ ದೃಶ್ಯಗಳು ಗ್ರಾಮೀಣ ಭಾಗದ ಕಹಿ ವಾಸ್ತವಕ್ಕೆ ಕನ್ನಡಿ ಹಿಡಿದಿವೆ.

ಮಾರುಕಟ್ಟೆಯಲ್ಲಿ ಗೃಹ ಬಳಕೆ ಸಿಲಿಂಡರ್ಗಳ ಯಾವುದೇ ಅಭಾವ ಇಲ್ಲ ಮತ್ತು ವಿತರಣೆ ಸುಗಮವಾಗಿದೆ ಎಂದು ಸರ್ಕಾರ ಹಾಗೂ ಅಧಿಕಾರಿಗಳು ಭರವಸೆ ನೀಡುತ್ತಲೇ ಇದ್ದಾರೆ. ಆದರೆ ಮುಧೋಳದ ಗ್ರಾಮೀಣ ಜನತೆಗೆ ಮಾತ್ರ ಸಕಾಲಕ್ಕೆ ಗ್ಯಾಸ್ ಸಿಗುತ್ತಿಲ್ಲ. ಗಂಟೆಗಟ್ಟಲೆ ಕ್ಯೂ ನಿಂತರೂ ಗ್ಯಾಸ್ ಸಿಗದೇ ಅನೇಕರು ಬರಿಗೈಲಿ ಮನೆಗೆ ಮರಳುತ್ತಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಗ್ಯಾಸ್ ಏಜೆನ್ಸಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಹಿರಿಯ ಅಧಿಕಾರಿಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
