ಬಾಗಲಕೋಟೆಯಲ್ಲಿ ಹುಚ್ಚು ನಾಯಿ ಕಡಿತಕ್ಕೆ ಯುವಕನೊಬ್ಬ ಬಲಿಯಾಗಿರುವ ಅತ್ಯಂತ ಮನಕಲಕುವ ಘಟನೆ ನಡೆದಿದೆ. ನಾಯಿ ಕಚ್ಚಿದಾಗ ಸೂಕ್ತ ಸಮಯದಲ್ಲಿ ಲಸಿಕೆ ಪಡೆಯದೆ ನಿರ್ಲಕ್ಷ್ಯ ವಹಿಸಿದ್ದೇ ಈ ದುರಂತಕ್ಕೆ ಕಾರಣವಾಗಿದ್ದು, ಸಾವಿಗೂ ಮುನ್ನ ಯುವಕ ಅನುಭವಿಸಿದ ಯಾತನೆಯ ವಿಡಿಯೋ ಪ್ರತಿಯೊಬ್ಬರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತಿದೆ

ವಿಜಯಪುರ ಜಿಲ್ಲೆ ನಿಡಗುಂದಿ ತಾಲ್ಲೂಕಿನ ಗೋಲಸಂಗಿ ಗ್ರಾಮದ ನಿವಾಸಿ ಪ್ರದೀಪ್ ಚಂದ್ರಶೇಖರ ಹಳೇರೊಳ್ಳಿ (22) ಎಂಬ ಯುವಕನೇ ಹುಚ್ಚು ನಾಯಿ ಕಡಿತದಿಂದ ಸಾವನ್ನಪ್ಪಿದ ದುರ್ದೈವಿ. ಕಳೆದ ಮಾರ್ಚ್ ತಿಂಗಳಲ್ಲಿ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಮನ್ನಿಕೇರಿ ಚಂದ್ರಾದೇವಿ ಜಾತ್ರೆಗೆ ಬಂದಿದ್ದಾಗ ಪ್ರದೀಪ್ಗೆ ಹುಚ್ಚು ಶ್ವಾನವೊಂದು ಕಚ್ಚಿತ್ತು. ಆದರೆ, ಆ ಸಮಯದಲ್ಲಿ ಯುವಕ ಯಾವುದೇ ಚಿಕಿತ್ಸೆ ಪಡೆಯದೆ, ಆಂಟಿ-ರೇಬಿಸ್ ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳದೆ ತೀವ್ರ ನಿರ್ಲಕ್ಷ್ಯ ತೋರಿದ್ದನು. ಪರಿಣಾಮವಾಗಿ ಇತ್ತೀಚೆಗೆ ರೇಬಿಸ್ ರೋಗದ ಲಕ್ಷಣಗಳು ಕಾಣಿಸಿಕೊಂಡು ಯುವಕ ತೀವ್ರವಾಗಿ ನರಳಾಡಿದ್ದಾನೆ. ಸಾವಿನ ದವಡೆಯಲ್ಲಿದ್ದಾಗ ಆತ ಪಟ್ಟ ಕಷ್ಟದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರ ಮನ ಕಲಕುತ್ತಿದೆ.

ವಾರದ ಹಿಂದೆ ತೀವ್ರ ಅಸ್ವಸ್ಥಗೊಂಡ ಯುವಕನನ್ನು ಮೊದಲು ನಿಡಗುಂದಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ, ಆ ಬಳಿಕ ಬಾಗಲಕೋಟೆಯ ಕೆರೂಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಕೈಮೀರಿದ ಕಾರಣ ನಿನ್ನೆ ಮಧ್ಯಾಹ್ನ 12 ಗಂಟೆಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ, ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಯುವಕ ಕೊನೆಯುಸಿರೆಳೆದಿದ್ದಾನೆ. ನಾಯಿ ಕಚ್ಚಿದ ತಕ್ಷಣ ಲಸಿಕೆ ಪಡೆಯದಿದ್ದರೆ ರೇಬಿಸ್ ಎಷ್ಟು ಪ್ರಾಣಾಂತಿಕವಾಗಬಹುದು ಎಂಬುದಕ್ಕೆ ಈ ಘಟನೆ ಕಣ್ಣೀರಿನ ಸಾಕ್ಷಿಯಾಗಿದ್ದು, ಸಾರ್ವಜನಿಕರು ಇಂತಹ ವಿಷಯಗಳಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ.
