ಉಗಾರ–ಕಲ್ಲಾಳ ಗ್ರಾಮಗಳ ಮಧ್ಯೆ ಹರಿಯುವ ಹಳ್ಳಕ್ಕೆ ಕಳೆದ ಹಲವು ವರ್ಷಗಳಿಂದ ರೈತರು ಬೇಡಿಕೆ ಇಟ್ಟಿದ್ದ ಚೆಕ್ ಡ್ಯಾಮ್ ನಿರ್ಮಾಣ ಕಾಮಗಾರಿಗೆ ಶಾಸಕ ರಾಜು ಕಾಗೆ ಅವರ ಪ್ರಯತ್ನದಿಂದ ₹೭೫ ಲಕ್ಷ ಅನುದಾನ ಮಂಜೂರಾಗಿದೆ. ಮಂಗಳವಾರ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಈ ಕಾಮಗಾರಿಗೆ ಚಾಲನೆ ನೀಡಲಾಯಿತು.


ಸಣ್ಣ ನೀರಾವರಿ ಇಲಾಖೆಯ ೪೭೨೦ ಅಣೆಕಟ್ಟು ಪಿಕ್ ಅಂತರ್ಜಲ ಅಭಿವೃದ್ಧಿ ಯೋಜನೆಯಡಿ ೨೦೨೫–೨೬ನೇ ಸಾಲಿನಲ್ಲಿ ಕೈಗೆತ್ತಿಕೊಳ್ಳಲಾದ ಈ ಕಾಮಗಾರಿಗೆ ಹಲ್ಯಾಳ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶಂಕರ್ ವಾಗಮೊಡೆ ಹಾಗೂ ಕುಸನಾಳ ಪಾರ್ಶ್ವನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲಗೌಡ ಪಾಟೀಲ್ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಗತಿಪರ ರೈತ ಬಾಹುಬಲಿ ನಿಡಗುಂದಿ ಹಾಗೂ ಶಂಕರ್ ವಾಗಮೊಡೆ, “ಶಾಸಕ ರಾಜು ಕಾಗೆ ಅವರು ರೈತ ಕುಟುಂಬದಲ್ಲಿ ಜನಿಸಿದವರಾಗಿದ್ದು, ರೈತರ ಸಮಸ್ಯೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಈ ಚೆಕ್ ಡ್ಯಾಮ್ ನಿರ್ಮಾಣದಿಂದ ಸುಮಾರು ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಅನುಕೂಲವಾಗಲಿದೆ. ಹಳ್ಳದ ಸುತ್ತಮುತ್ತಲಿನ ಬಾವಿ ಹಾಗೂ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ, ಬೇಸಿಗೆಯಲ್ಲಿಯೂ ನೀರಿನ ಸಮಸ್ಯೆ ತಗ್ಗಲಿದೆ” ಎಂದು ಹೇಳಿದರು.
ಸಣ್ಣ ನೀರಾವರಿ ಇಲಾಖೆಯ ಶಾಖಾ ಅಭಿಯಂತರ ಸಚಿನ್ ಮಾಳಿ ಯೋಜನೆಯ ತಾಂತ್ರಿಕ ಮಾಹಿತಿ ನೀಡಿದರು. ಗುತ್ತಿಗೆದಾರ ಬಿ.ಕೆ. ಮಗದುಮ್ ಅವರು ಸರ್ಕಾರ ನಿಗದಿಪಡಿಸಿದ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು.
ಪೂಜಾ ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಮಲಗೌಡ ಪಾಟೀಲ್, ಪ್ರಭು ದಾನೋಳಿ, ಮಲ್ಲು ದಾನೋಳಿ, ರಮೇಶ್ ಪವಾರ್, ಅನಿಲ್ ಪಮ್ಮನವರ್, ಅನ್ನಾಸಾಹೇಬ್ ಹಳಿಜೋಳ, ಶಾಂತಿನಾಥ ನಿಡಗುಂದಿ, ಸದಾಶಿವ ನಾನಿಕರ, ಬಸಪ್ಪ ದಾನೊಳ್ಳಿ, ಸಮ್ಯದ ಪಮ್ಮನವರ, ನಿಂಗಪ್ಪ ಹುಲ್ಯಾಳ, ರಾಘವೇಂದ್ರ ದಾನೋಳಿ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.
