Kagawad

ಐನಾಪುರದಲ್ಲಿ ರೈತರ ಗದ್ದೆ ರಸ್ತೆ ಕಾಮಗಾರಿಗೆ ಚಾಲನೆ

Share

ಐನಾಪುರ ಪಟ್ಟಣದ ಮುಖ್ಯ ರಸ್ತೆಯಿಂದ ರೈತರ ಗದ್ದೆಗಳಿಗೆ ಸಂಪರ್ಕಿಸುವ ರಸ್ತೆ ನಿರ್ಮಿಸುವಂತೆ ಇಲ್ಲಿನ ರೈತರು ಶಾಸಕ ರಾಜು ಕಾಗೆ ಅವರ ಬಳಿ ಬೇಡಿಕೆ ಇಟ್ಟಿದ್ದರು. ರೈತರ ಬೇಡಿಕೆಗೆ ಸ್ಪಂದಿಸಿದ ಶಾಸಕರು, ತಮ್ಮ ವಿಶೇಷ ಅನುದಾನದಡಿ 80 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಶಾಸಕರ ಅನುಪಸ್ಥಿತಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಅರುಣ ಗಾಣಿಗೇರ್ ಹಾಗೂ ಪ್ರವೀಣ ಗಾಣಿಗೇರ್ ಅವರ ಮುಖ್ಯ ಉಪಸ್ಥಿತಿಯಲ್ಲಿ ಈ ಕಾಮಗಾರಿಗೆ ಚಾಲನೆ ನೀಡಲಾಯಿತು.

ಗುರುವಾರದಂದು ಮುಖ್ಯಮಂತ್ರಿಗಳ ವಿಶೇಷ ಅನುದಾನವನ್ನು ಶಾಸಕ ರಾಜು ಕಾಗೆ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ನೀಡಿ, ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರವೀಣ ಗಾಣಿಗೇರ್, ಅರುಣ ಗಾಣಿಗೇರ್ ಹಾಗೂ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ ಅವರ ಮುಖ್ಯ ಉಪಸ್ಥಿತಿಯಲ್ಲಿ ಬಾರಿಗಡ್ಡಿ ರಸ್ತೆ ಮತ್ತು ಹಾನಗಲ್ ರಸ್ತೆ ಕಾಮಗಾರಿಗಳಿಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಕಾಮಗಾರಿ ಉದ್ಘಾಟಿಸಿ ಪ್ರವೀಣ ಗಾಣಿಗೇರ್ ಹಾಗೂ ಅರುಣ ಗಾಣಿಗೇರ್ ಮಾತನಾಡಿ, “ಶಾಸಕ ರಾಜು ಕಾಗೆ ಅವರನ್ನು ಈ ಭಾಗದ ರೈತರು ಅನೇಕ ವರ್ಷಗಳಿಂದ ನಮ್ಮ ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ಸಾಗಿಸಲು ರಸ್ತೆ ನಿರ್ಮಿಸಿಕೊಡುವಂತೆ ಕೇಳಿಕೊಳ್ಳುತ್ತಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಅವರು ಎರಡು ರಸ್ತೆಗಳಿಗೆ 80 ಲಕ್ಷ ರೂಪಾಯಿ ಅನುದಾನ ನೀಡಿದ್ದಾರೆ. ಶೀಘ್ರದಲ್ಲಿಯೇ ಈ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಎಲ್ಲರೂ ಸಹಕರಿಸಬೇಕು” ಎಂದು ಕೇಳಿಕೊಂಡರು.

ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಭಿಯಂತರಾದ ವೀರಣ್ಣ ವಾಲಿ ಮಾತನಾಡಿ, “ಮುಖ್ಯಮಂತ್ರಿಗಳ ವಿಶೇಷ ಅನುದಾನ ಹಾಗೂ ಶಾಸಕರ ನಿಧಿಯ ಮುಖಾಂತರ 80 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ರಸ್ತೆಗಳಿಗೆ ಶಾಸಕರ ಆದೇಶದ ಮೇರೆಗೆ ಅವರ ಹುಟ್ಟುಹಬ್ಬದ ದಿನದಂದೇ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಎಲ್ಲ ರೈತರು ರಸ್ತೆ ನಿರ್ಮಿಸಲು ಸಹಕರಿಸಬೇಕು” ಎಂದು ಕರೆ ನೀಡಿದರು.

ನಿವೃತ್ತ ಅಭಿಯಂತರು ಹಾಗೂ ಹಿರಿಯ ಸಮಾಜ ಸೇವಕರಾದ ಗೋಪಾಲ ಕಟ್ಟಿ ಮಾತನಾಡಿ, “ಇಲ್ಲಿನ ರೈತರು ಶಾಸಕರ ಬಳಿ ಅನೇಕ ವರ್ಷಗಳಿಂದ ರಸ್ತೆ ನಿರ್ಮಿಸುವ ಕಾಮಗಾರಿ ಬಗ್ಗೆ ಕೇಳಿಕೊಂಡಿದ್ದರು. ಇದನ್ನು ಗಮನಿಸಿ ಅವರು ಅನುದಾನ ಮಂಜೂರು ಗೊಳಿಸಿದ್ದಾರೆ. ಅವರಿಗೆ ಅವರ ಹುಟ್ಟುಹಬ್ಬದ ನಿಮಿತ್ತ ರೈತರ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದರು.

ಈ ವೇಳೆ ಐನಾಪುರ ಪಟ್ಟಣ ಪಂಚಾಯಿತಿ ಸದಸ್ಯ ಸಂಜಯ್ ಬಿರಡಿ, ಡಾಕ್ಟರ್ ಅರವಿಂದ ಕಾರಚಿ, ಕುಮಾರ್ ಜೈಕರ್, ಸುಭಾಷ್ ಪಾಟೀಲ್, ಜಮಣರಾವ್ ಪಾಟೀಲ್, ಪ್ರವೀಣ್ ಕುಲಕರ್ಣಿ, ಸುನಿಲ್ ಅವಟಿ, ಗುತ್ತಿಗೆದಾರರಾದ ಬಸವರಾಜ್ ಬಂಗಿ, ಅಶೋಕ್ ಪಾಟೀಲ್, ಶಿವಾನಂದ ಬೆಳಕೂಡ, ಗಿರೀಶ್ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:

error: Content is protected !!