Kagawad

ಕಾಗವಾಡದಲ್ಲಿ ಬಿರುಗಾಳಿ ಅಬ್ಬರ: ಸರ್ಕಾರಿ ಶಾಲೆಯ ಮೇಲ್ಚಾವಣಿ ಧರಾಶಾಯಿ; ಆಂಬುಲೆನ್ಸ್ ಜಖಂ!!!

Share

ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ಅಕಾಲಿಕ ಮಳೆ ಮತ್ತು ಬಿರುಗಾಳಿ ಭಾರೀ ಅನಾಹುತ ಸೃಷ್ಟಿಸಿದೆ. ಗಾಳಿಯ ರಭಸಕ್ಕೆ ಸರ್ಕಾರಿ ಶಾಲೆಯ ಮೇಲ್ಚಾವಣಿ ಹಾರಿ ಹೋಗಿದ್ದು, ಸಾರ್ವಜನಿಕ ಆಸ್ತಪಾಸ್ತಿಗೆ ಹಾನಿಯಾಗಿದೆ. ಈ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಕಾಗವಾಡ ಪಟ್ಟಣ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಬುಧವಾರ ಸಂಜೆ ಅಕಾಲಿಕ ಮಳೆಯೊಂದಿಗೆ ಬೀಸಿದ ಭಾರಿ ಬಿರುಗಾಳಿಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಿರುಗಾಳಿಯ ರಭಸಕ್ಕೆ ಇಲ್ಲಿನ ಸರ್ಕಾರಿ ಕನ್ನಡ ಶಾಲೆಯ ಮೇಲ್ಚಾವಣಿಯ ಪತ್ರಾಸ್‌ಗಳು ಸಂಪೂರ್ಣವಾಗಿ ಉರುಳಿ ಬಿದ್ದಿವೆ. ಅದೃಷ್ಟವಶಾತ್, ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳು ಇಲ್ಲದ ಕಾರಣ ಸಂಭವಿಸಬಹುದಾದ ದೊಡ್ಡ ಮಟ್ಟದ ಪ್ರಾಣಾಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.

ಬಿರುಗಾಳಿಯ ಆರ್ಭಟಕ್ಕೆ ಕೇವಲ ಶಾಲೆಯಷ್ಟೇ ಅಲ್ಲದೆ, ಪಶು ವೈದ್ಯಕೀಯ ಇಲಾಖೆಯ ಆಂಬುಲೆನ್ಸ್‌ಗೂ ಹಾನಿಯಾಗಿದೆ. ಸರ್ಕಾರಿ ಉರ್ದು ಶಾಲೆಯ ಆವರಣದಲ್ಲಿದ್ದ ಕುಡಿಯುವ ನೀರಿನ ಟ್ಯಾಂಕ್ ಗಾಳಿಗೆ ಸಿಲುಕಿ ಆಂಬುಲೆನ್ಸ್ ಮೇಲೆ ಬಿದ್ದ ಪರಿಣಾಮ ವಾಹನದ ಮುಂಭಾಗದ ಗಾಜುಗಳು ಪುಡಿಪುಡಿಯಾಗಿವೆ. ಕಳೆದ ವರ್ಷವಷ್ಟೇ ದುರಸ್ತಿ ಕಂಡಿದ್ದ ಕನ್ನಡ ಶಾಲೆಯ ಮೇಲ್ಚಾವಣಿ ಮತ್ತೆ ಹಾರಿ ಹೋಗಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದ್ದು, ಕಳಪೆ ಕಾಮಗಾರಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡುರಂಗ ಮದಭಾವಿ ಅವರು, ಘಟನೆಯ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಹಾನಿಗೊಳಗಾದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಕಾಲಿಕ ಮಳೆಯಿಂದ ನಷ್ಟ ಅನುಭವಿಸಿದ ಜನರಿಗೆ ತಾಲೂಕು ಆಡಳಿತ ತಕ್ಷಣವೇ ಸೂಕ್ತ ಪರಿಹಾರ ಘೋಷಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Tags:

error: Content is protected !!