State

ಸಿದ್ದರಾಮಯ್ಯ ಸರ್ಕಾರಕ್ಕೆ ಸಾರ್ಥಕ 3 ವರ್ಷ: ತುಮಕೂರಿನಲ್ಲಿ ಸಾಧನಾ ಸಮಾವೇಶದ ಮೂಲಕ ಶಕ್ತಿಪ್ರದರ್ಶನ, ಕುಮಾರಸ್ವಾಮಿ ವಿರುದ್ಧ ಡಿಕೆಶಿ ಕಿಡಿ!

Share

• ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ 3 ವರ್ಷ
• ತುಮಕೂರಿನಲ್ಲಿ ನವ ಕರ್ನಾಟಕ ಸಾಧನಾ ಸಮಾವೇಶ
• 580 ಭರವಸೆಗಳಲ್ಲಿ 290 ಈಡೇರಿಕೆ: ಸಿಎಂ
• ಹೆಚ್‌ಡಿಕೆ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ

2023 ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ನೀಡಲಾಗಿದ್ದ 580 ಭರವಸೆಗಳ ಪೈಕಿ 290 ಭರವಸೆಗಳನ್ನು ಈಡೇರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸರ್ಕಾರಕ್ಕೆ ಮೂರು ವರ್ಷಗಳು ಪೂರೈಸಿರುವ ಸಂದರ್ಭದಲ್ಲಿ ತುಮಕೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಆಯೋಜಿಸಿದ್ದ, “ಮೂರು ವರ್ಷಗಳ ಸಾಧನಾ ಸಮರ್ಪಣಾ” ಸಮಾವೇಶ ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿ ಬಳಿಕ, “ನವ ಕರ್ನಾಟಕ” ಅಭಿವೃದ್ಧಿ ಮಾದರಿಯ ವಸ್ತು ಪ್ರದರ್ಶನ ಮತ್ತು ತುಮಕೂರು ಜಿಲ್ಲೆಯಲ್ಲಿ ನಡೆದಿರುವ 682 ಕೋಟಿ ಮೊತ್ತದ ಬೃಹತ್ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು. ನಾವು ಅಧಿಕಾರಕ್ಕೆ ಬಂದ ಬಳಿಕ‌ ಸರ್ವ ಜಾತಿ, ಸರ್ವ ಧರ್ಮದ ಸಕಲ ಜನತೆಯ ಅಭಿವೃದ್ಧಿಗೆ ಕೆಲಸ ಮಾಡಿದ್ದೇವೆ. ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಬಿಜೆಪಿಯವರ ರೀತಿ ಜಾತಿ ಧರ್ಮದದ ಹೆಸರಲ್ಲಿ ಮನುಷ್ಯರನ್ನು ವಿಭಜಿಸುವ ಕೆಟ್ಟ ರಾಜಕಾರಣ ನಾವು ಮಾಡಲಿಲ್ಲ. ಬಿಜೆಪಿಯವರ ಎಲ್ಲಾ ಅಪಪ್ರಚಾರಗಳನ್ನು ಸುಳ್ಳಾಗಿಸಿ ನಾವು ಅಭಿವೃದ್ಧಿ ಮಾಡಿ ತೋರಿಸಿದ್ದೇವೆ ಎಂದರು.

ಇನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೊಟ್ಟ ಕುದುರೆ ಏರಲಾರದವ ಶೂರನು ಅಲ್ಲ ವೀರನೂ ಅಲ್ಲ. ಅಧಿಕಾರ ಕೊಟ್ಟಾಗ ಏನೂ ಮಾಡೋಕೆ ಆಗಿಲ್ಲ. ಅಧಿಕಾರ ಇಲ್ಲದೇ ಇದ್ದಾಗ ನಾನು ಹರಿತಿನಿ, ಹರಿತಿನಿ ಅಂದ್ರೆ ಏನೂ ಮಾಡುವುದಕ್ಕೂ ಆಗೋವುದಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಡಿಕೆಶಿ ಗುಡುಗಿದ್ದಾರೆ. ನಿಮ್ಮ ಜೊತೆಗೆ ಇರುವ ಶಾಸಕರಲ್ಲಿ ಒಬ್ಬರೇ ಒಬ್ಬರು ಕೂಡ ಜನರ ಪರವಾಗಿ ಮಾತನಾಡಿಲ್ಲ. ಬಿಜೆಪಿ ಸ್ನೇಹಿತರು ಬಹಳ ಕನಸು ಕಾಣ್ತಿದ್ದಾರೆ. ನಿಮ್ಮ ಪ್ರಧಾನಿ ಯಾಕೆ ಅಡುಗೆ ಎಣ್ಣೆ ಬಳಸಬೇಡಿ, ಚಿನ್ನ ತಗೋಬೇಡಿ ಅಂತ ಹೇಳ್ತಿದಾರೆ. ನಿಮ್ಮ ಬೆವರಿನ ಬದುಕಿಗೆ ನಿಮ್ಮ ಶ್ರಮದ ಬದುಕಿಗೆ ಸಂತೋಷವಾಗಿ ಇರಬೇಕು. ಪೆಟ್ರೋಲ್ ಬೆಲೆ ಜಾಸ್ತಿ ಆಯ್ತು, ಈ ಬಗ್ಗೆ ಅಶೋಕ್, ವಿಜಯೇಂದ್ರ ಯಾಕೆ ಮಾತನಾಡ್ತಿಲ್ಲ? ಸಂಸದರು ಮಾತನಾಡ್ತಾ ಇಲ್ಲ ಯಾಕೆ ಅಂತ ಡಿಕೆ ಶಿವಕುಮಾರ್ ಕಿಡಿಕಾರಿದ್ರು.

ಕರ್ನಾಟಕ ಸರ್ಕಾರ ಮತ್ತು ತುಮಕೂರು ಜಿಲ್ಲಾಡಳಿತದ ಸಹಯೋಗದಲ್ಲಿ, ಪ್ರಗತಿಯತ್ತ ಕರ್ನಾಟಕ ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರ ಸಾರ್ಥಕ ಸೇವೆ ಸಮಪರ್ಣೆ ಸಮಾವೇಶವನ್ನು ಆಯೋಜಿಸಲಾಗಿತ್ತು.

ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು, ಮೂರು ವರ್ಷಗಳಲ್ಲಿ ಸಿಎಂ ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರ ವಿವಿಧ ಇಲಾಖೆಗಳಲ್ಲಿ ಪ್ರಗತಿಯನ್ನು ಸಾಧಿಸಿದೆ. ಹಲವಾರು ಸವಾಲುಗಳನ್ನು ಎದುರಿಸಿ ಕರ್ನಾಟಕದ ಜನತೆಗೆ ಒಳ್ಳೆಯ ಆಡಳಿತವನ್ನು ಸರ್ಕಾರ ನೀಡಿದೆ. ಗ್ಯಾರಂಟಿ ಸೇರಿದಂತೆ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿದ್ದು, ಇನ್ನುಳಿದ 2 ವರ್ಷಗಳಲ್ಲಿ ಜನಹಿತದಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ಜಾರಿ ಮಾಡಲಿದೆ. ಸರ್ಕಾರ ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕಿದೆ. 2 ವರ್ಷದ ನಂತರ ಮತ್ತೇ ಯುದ್ಧಕ್ಕೆ ಹೋಗಬೇಕಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಲವಾರು ಅಭಿವೃದ್ಧಿಗಳ ಮೂಲಕ ಸಾರ್ಥಕ ಸರ್ಕಾರವನ್ನು ನಾವು ನೀಡಿದ್ದೇವೆ. ಚುನಾವಣೆ ಪೂರ್ವ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತ, ಗ್ಯಾರಂಟಿಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಯ ತನಕ ತಲುಪಿಸುತ್ತಿದ್ದೇವೆಂಬುದು ಹೆಮ್ಮೆಯ ವಿಷಯ. ಕೇಂದ್ರ ಸರ್ಕಾರದ ಅಸಹಾಕರವಿದ್ದರೂ, ಪದೇ ಪದೇ ಅನ್ಯಾಯ ಮಾಡಿದರೂ ಕೂಡ, ರಾಜ್ಯದ ಜಿ.ಎಸ್.ಟಿ ಹಣ ಬರದಿದ್ದರೂ, 1 ವರ್ಷಕ್ಕೆ ಗ್ಯಾರಂಟಿ ಯೋಜನೆಗಳಿಗೆ 60 ಸಾವಿರ ಕೋಟಿಯಷ್ಟು ಬಳಸಲಾಗುತ್ತಿದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ 28 ಸಾವಿರ ಕೋಟಿಯನ್ನು ಗೃಹಲಕ್ಷ್ಮೀಗಾಗಿ ಬಳಸಲಾಗುತ್ತಿದೆ ಎಂದರು. ಗ್ಯಾರಂಟಿಗಳನ್ನು ಟೀಕಿಸುವ ವಿರೋಧ ಪಕ್ಷದವರು ಇಡೀ ದೇಶದಲ್ಲಿ ನಮ್ಮ ಮಾದರಿಗಳನ್ನು ನಕಲು ಮಾಡುತ್ತಿದ್ದಾರೆ. ಭ್ರಷ್ಟಾಚಾರ ರಹಿತ ಜನಸ್ನೇಹಿ ಸರ್ಕಾರ ನಮ್ಮದಾಗಿದೆ ಎಂದರು.

Tags:

error: Content is protected !!