BELAGAVI

ಬೆಳಗಾವಿ ಕಂಟೋನ್ಮೆಂಟ್ನಲ್ಲಿ ಪ್ಲಾಸ್ಟಿಕ್ ಮುಕ್ತ ಸ್ವಚ್ಛತಾ ಆಂದೋಲನ: ಅತಿಕ್ರಮಣದಾರರು ಹಾಗೂ ನಿಯಮ ಉಲ್ಲಂಘಿಸುವವರಿಗೆ ಸಿಇಒ ಖಡಕ್ ಎಚ್ಚರಿಕೆ!

Share

ಬೆಳಗಾವಿ ಕಂಟೋನ್ಮೆಂಟ್ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತ ಹಾಗೂ ಸ್ವಚ್ಛ ಪ್ರದೇಶವನ್ನಾಗಿ ಮಾಡಲು ದಂಡು ಮಂಡಳಿ ಭಾರಿ ಹೈ-ಪ್ರಯಾರಿಟಿ ಕಾರ್ಯಾಚರಣೆ ಆರಂಭಿಸಿದೆ. ಎಂಎಲ್ಐಆರ್ಸಿ ಕಮಾಂಡೆಂಟ್ ಗಿರೀಶ್ ಉಪಾಧ್ಯಾಯ ಅವರ ನಿರ್ದೇಶನದಂತೆ ಸಿಇಒ ಸುದಾಮ್ ವಿಜಯ್ ಮಂಚಾಲಕರ್ ನೇತೃತ್ವದಲ್ಲಿ ಇಂದು ಮುಂಜಾನೆಯಿಂದಲೇ ಬೃಹತ್ ಸ್ವಚ್ಛತಾ ಆಂದೋಲನ ಆರಂಭವಾಗಿದ್ದು, ನಿಯಮ ಉಲ್ಲಂಘಿಸುವ ಸಾರ್ವಜನಿಕರು ಹಾಗೂ ರಸ್ತೆ ಅತಿಕ್ರಮಣದಾರರಿಗೆ ಕಠಿಣ ಎಚ್ಚರಿಕೆ ನೀಡಲಾಗಿದೆ.

ಕಂಟೋನ್ಮೆಂಟ್ ಮಂಡಳಿ ಅಧ್ಯಕ್ಷರೂ ಆಗಿರುವ ಎಂಎಲ್ಐಆರ್ಸಿ ಕಮಾಂಡೆಂಟ್ ಗಿರೀಶ್ ಉಪಾಧ್ಯಾಯ, ಶಾಸಕ ಆಸಿಫ್ (ರಾಜು ಸೈತ್) ಹಾಗೂ ಕಂಟೋನ್ಮೆಂಟ್ ಮಂಡಳಿ ಸದಸ್ಯ ಸುಧೀರ್ ತುಪ್ಪೇಕರ್ ಅವರ ಸಮ್ಮುಖದಲ್ಲಿ ನಡೆದ ಸಭೆಯ ತೀರ್ಮಾನದಂತೆ, ಇಂದು ಮುಂಜಾನೆ 6 ಗಂಟೆಯಿಂದಲೇ ವಿಶೇಷ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಆಂದೋಲನಕ್ಕೆ ಚಾಲನೆ ನೀಡಲಾಗಿದೆ. ಒಟ್ಟು 84 ಸಫಾಯಿ ಕರ್ಮಚಾರಿಗಳು ಈ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ನಾಲಾಗಳು, ಚರಂಡಿಗಳು ಹಾಗೂ ಆಟದ ಮೈದಾನಗಳಿಂದ ಈಗಾಗಲೇ ಸುಮಾರು 1 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರತೆಗೆಯಲಾಗಿದೆ. ಆದರೆ, ಈ ಸ್ವಚ್ಛತಾ ಕಾರ್ಯದ ವೇಳೆ ಬೋಗಾರವೇಸ್ ನಾಲಾ ಬಳಿ ಅಪಾಯಕಾರಿ ವೈದ್ಯಕೀಯ ತ್ಯಾಜ್ಯ (ಮೆಡಿಕಲ್ ವೇಸ್ಟ್) ಮತ್ತು ಪ್ಲಾಸ್ಟಿಕ್ ಬ್ಯಾಗ್ಗಳಲ್ಲಿ ತುಂಬಿದ ಹೋಟೆಲ್ ತ್ಯಾಜ್ಯ ಪತ್ತೆಯಾಗಿರುವುದು ಕಳವಳ ಮೂಡಿಸಿದೆ. ಕಂಟೋನ್ಮೆಂಟ್ ವ್ಯಾಪ್ತಿಯಿಂದ ಹೊರಗಿನ ಜನರು ಕ್ಯಾಂಪ್ ಏರಿಯಾದ ಚಾಂಗಡ ಬಸ್ ಸ್ಟಾಪ್ನಿಂದ ಗಣೇಶಪುರ ಮತ್ತು ಹಿಗಲ್ಗಾ ರಸ್ತೆಯ ಬದಿಗಳಲ್ಲಿ ಕಾನೂನುಬಾಹಿರವಾಗಿ ಕಸ ಸುರಿಯುತ್ತಿರುವುದು ಕಂಡುಬಂದಿದೆ.

ಪ್ಲಾಸ್ಟಿಕ್ ತ್ಯಾಜ್ಯಗಳು ಚರಂಡಿಗಳನ್ನು ಬ್ಲಾಕ್ ಮಾಡುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ, ಮಲೇರಿಯಾ, ಚಿಕೂನ್ಗುನ್ಯಾದಂತಹ ಪ್ರಾಣಾಂತಿಕ ಕಾಯಿಲೆಗಳು ಹರಡುತ್ತಿವೆ ಎಂದು ಸಿಇಒ ಸುದಾಮ್ ವಿಜಯ್ ಮಂಚಾಲಕರ್ ಕಳವಳ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ, ಕ್ಯಾಂಪ್ ಪ್ರದೇಶದ ಕೆಲವು ನಿವಾಸಿಗಳು ತಮ್ಮ ಮನೆಗಳ ಮುಂದೆ ಕಬ್ಬಿಣದ ಶೆಡ್ ಹಾಗೂ ಇತರೆ ಮುಂಭಾಗದ ರಚನೆಗಳನ್ನು ನಿರ್ಮಿಸಿ ರಸ್ತೆಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವುದು ಕಾರ್ಯಾಚರಣೆಯ ವೇಳೆ ಬೆಳಕಿಗೆ ಬಂದಿದೆ. ಇದರಿಂದಾಗಿ ಅಗ್ನಿಶಾಮಕ ವಾಹನ, ಆಂಬ್ಯುಲೆನ್ಸ್ ಹಾಗೂ ಸ್ವಚ್ಛತಾ ವಾಹನಗಳ ಸಂಚಾರಕ್ಕೆ ತೀವ್ರ ಅಡ್ಡಿಯಾಗುತ್ತಿದ್ದು, ಇಂತಹ ಅನಧಿಕೃತ ಅತಿಕ್ರಮಣಗಳನ್ನು ತಕ್ಷಣವೇ ತೆರವುಗೊಳಿಸಬೇಕು, ಇಲ್ಲದಿದ್ದರೆ ಮಂಡಳಿಯಿಂದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಕಡ್ಡಾಯವಾಗಿ ಕಸ ಸಂಗ್ರಹಣಾ ವಾಹನಗಳಿಗೇ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

Tags:

error: Content is protected !!