ಮೇ ತಿಂಗಳು ಮುಗಿಯುತ್ತ ಬಂದರೂ ಸರ್ವರ್ ಡೌನ್ ಆಗುತ್ತಿದೆ. ಈ ನೆಪದಿಂದ ಕಾಗವಾಡ ತಾಲೂಕಿನ ಅನೇಕ ಪಡಿತರ ಚೀಟಿದಾರರು ಪಡಿತರ ಧಾನ್ಯ ಪಡೆದುಕೊಳ್ಳಲು ತೊಂದರೆ ಅನುಭವಿಸುತ್ತಿದ್ದಾರೆ. ಉರಿ ಬಿಸಿಲಿನಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಪಡಿತರ ಅಂಗಡಿಯ ಮುಂದೆ ನಿಂತರೂ ಪಡಿತರ ಧಾನ್ಯ ಸಿಗದೆ ಬರಿಗೈಲಿ ಮರಳಿ ಹೋಗುವ ಸ್ಥಿತಿ ಉಂಟಾಗಿದೆ.

ಕಾಗವಾಡ ತಾಲೂಕಿನ ಕಾಗವಾಡ, ಶೇಡಬಾಳ, ಉಗಾರ್, ಐನಾಪುರ, ಕುಸನಾಳ, ಶಿರಗುಪ್ಪಿ, ಜುಗುಳ ಮುಂತಾದ ಗ್ರಾಮಗಳ ಪಡಿತರದಾರರು ಮೇ ತಿಂಗಳಿನ ರೇಷನ್ ತೆಗೆದುಕೊಳ್ಳಲು ಹೋದಾಗ ಎರಡು ಸಲ ಹೆಬ್ಬೆಟ್ಟು (ಬಯೋಮೆಟ್ರಿಕ್) ತೆಗೆದುಕೊಳ್ಳುತ್ತಿದ್ದಾರೆ ಎಂದು ಕೆಲವರು ಹೇಳಿದರು. ಆದರೆ ಪ್ರತಿಯೊಬ್ಬ ಪಡಿತರದಾರರಿಗೆ ಮೇ ಹಾಗೂ ಜೂನ್ ತಿಂಗಳ ಪಡಿತರ ಧಾನ್ಯವನ್ನು ಒಟ್ಟಿಗೆ ನೀಡಲಾಗುತ್ತಿರುವ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಅನೇಕ ಅಂಗಡಿ ಮಾಲೀಕರು ಈ ಬಗ್ಗೆ ಬೇರೆ ಬೇರೆ ಮಾಹಿತಿಯನ್ನು ನೀಡುತ್ತಿದ್ದರು.

ಈ ಬಗ್ಗೆ ಕಾಗವಾಡ ತಾಲೂಕು ಆಹಾರ ನಿರೀಕ್ಷಕರಾದ ಸಂತೋಷಕುಮಾರ್ ಬುರುಡೆ ಇವರನ್ನು ಸಂಪರ್ಕಿಸಿದಾಗ, “ಮೇ ತಿಂಗಳಿನಲ್ಲಿ ನೀಡುತ್ತಿರುವ ಪಡಿತರ ಧಾನ್ಯವು ಮೇ ಹಾಗೂ ಜೂನ್ ತಿಂಗಳ ಒಟ್ಟು ಪಡಿತರವಾಗಿದೆ. ಇದು ಕೇಂದ್ರ ಸರ್ಕಾರದ ಎನ್.ಎಫ್.ಎಸ್.ಎ (NFSA) ಪಡಿತರವಾಗಿದ್ದು, ಕಾಗವಾಡ ತಾಲೂಕಿನಲ್ಲಿ 31,200 ಬಿಪಿಎಲ್ ಕಾರ್ಡ್ದಾರರು ಹಾಗೂ 19,035 ಅಂತ್ಯೋದಯ ಕಾರ್ಡ್ದಾರರಿದ್ದಾರೆ. ಇವರಿಗೆ ಎರಡು ತಿಂಗಳ ಪಡಿತರ ಧಾನ್ಯವನ್ನು ನೀಡಲಾಗುತ್ತಿದೆ,” ಎಂದು ತಿಳಿಸಿದರು.
“ಈಗಾಗಲೇ 20 ಸಾವಿರ ಕಾರ್ಡ್ದಾರರು ಧಾನ್ಯ ಪಡೆದುಕೊಂಡಿದ್ದಾರೆ. ಸರ್ವರ್ ತೊಂದರೆ ಇರುವುದು ಸತ್ಯ. ಆದರೆ ಬರುವ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಮೇಲಾಧಿಕಾರಿಗಳು ಸರ್ವರ್ ತೊಂದರೆಯನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ,” ಎಂದು ಆಹಾರ ನಿರೀಕ್ಷಕ ಸಂತೋಷಕುಮಾರ್ ಬುರುಡೆ ಮಾಹಿತಿ ನೀಡಿದರು.
