ಬೆಳಗಾವಿ ಮಹಾನಗರ ಪಾಲಿಕೆಯಿಂದ ಎಲ್ ಆಂಡ್ ಟಿ ಸಂಸ್ಥೆಗೆ ಹಸ್ತಾಂತರಗೊಂಡಿದ್ದ 300ಕ್ಕೂ ಹೆಚ್ಚು ಗುತ್ತಿಗೆ ನೌಕರರ ಭವಿಷ್ಯ ಈಗ ಸಂಪೂರ್ಣ ಅತಂತ್ರವಾಗಿದೆ. ಪ್ರಾಜೆಕ್ಟ್ ಮುಕ್ತಾಯದ ನೆಪವೊಡ್ಡಿ ಎಲ್ ಆಂಡ್ ಟಿ ಸಂಸ್ಥೆಯು 100ಕ್ಕೂ ಅಧಿಕ ಸಿಬ್ಬಂದಿಗೆ ತುರ್ತು ನೋಟಿಸ್ ಜಾರಿ ಮಾಡಿದ್ದು, ಮೇ 31ರವರೆಗೆ ಮಾತ್ರ ಸೇವೆ ಸೀಮಿತಗೊಳಿಸಿದೆ. ಈ ತಾರತಮ್ಯದ ಧೋರಣೆಯನ್ನು ಖಂಡಿಸಿ ದಲಿತ ಮುಖಂಡ ಮಲ್ಲೇಶ್ ಚೌಗಲೆ ನೇತೃತ್ವದಲ್ಲಿ ನೌಕರರು ಇಂದು ಮಹಾಪೌರರಿಗೆ ಮನವಿ ಸಲ್ಲಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.


ಸುಮಾರು 28ರಿಂದ 30 ವರ್ಷಗಳ ಕಾಲ ಜಲಮಂಡಳಿಯಲ್ಲಿ ಹಗಲಿರುಳು ಸುದೀರ್ಘ ಸೇವೆ ಸಲ್ಲಿಸಿ, ತದನಂತರ ಎಲ್ ಆಂಡ್ ಟಿ ಸಂಸ್ಥೆಯ ವ್ಯಾಪ್ತಿಗೆ ಒಳಪಟ್ಟಿದ್ದ ಗುತ್ತಿಗೆ ನೌಕರರಿಗೆ ಈಗ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಸಂಸ್ಥೆಯ ಬಳಿ ನಿಧಿ ಲಭ್ಯವಿಲ್ಲ ಎಂಬ ಕಾರಣ ನೀಡಿ ನೌಕರರನ್ನು ಏಕಾಏಕಿ ಸೇವೆಯಿಂದ ಬಿಡುಗಡೆಗೊಳಿಸಲು ಎಲ್ ಆಂಡ್ ಟಿ ಮುಂದಾಗಿದೆ. ಮೂಲ ಷರತ್ತಿನ ಪ್ರಕಾರ ಎರಡು ವರ್ಷಗಳ ಸೇವೆಯ ಬಳಿಕ ಎಲ್ ಆಂಡ್ ಟಿ ಸಂಸ್ಥೆಯು ಈ ನೌಕರರನ್ನು ಮರಳಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಬೇಕಾಗಿತ್ತು. ಆದರೆ ಯಾವುದೇ ಪೂರ್ವಸೂಚನೆ ಇಲ್ಲದೆ ತರಾತುರಿಯಲ್ಲಿ ಈ ಕ್ರಮ ಕೈಗೊಂಡಿರುವುದು ನೌಕರರ ಆಕ್ರೋಶಕ್ಕೆ ಕಾರಣವಾಗಿದ್ದು, ಮಕ್ಕಳ ಶಿಕ್ಷಣ, ಪೋಷಕರ ಆರೋಗ್ಯ ವೆಚ್ಚ ಹಾಗೂ ಜೀವನ ನಿರ್ವಹಣೆಗಾಗಿ ನೌಕರರ ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ.

ಇದೇ ವೇಳೆ, ಇತ್ತೀಚೆಗೆ ನೇಮಕಗೊಂಡ ಕೆಲವು ಅಧಿಕಾರಿಗಳ ರಕ್ತಸಂಬಂಧಿಗಳಿಗೆ ಹಾಗೂ ಶಾಸಕರ ಶಿಫಾರಸ್ಸಿನ ಮೇರೆಗೆ ಬಂದವರಿಗೆ ಯಾವುದೇ ನೋಟಿಸ್ ನೀಡದೆ ಉಳಿಸಿಕೊಂಡಿರುವುದು ನೌಕರರಲ್ಲಿ ತೀವ್ರ ಅನುಮಾನ ಹಾಗೂ ಅಸಮಾಧಾನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಇಂದು ದಲಿತ ಮುಖಂಡ ಮಲ್ಲೇಶ್ ಚೌಗಲೆ ನೇತೃತ್ವದಲ್ಲಿ ನೌಕರರ ನಿಯೋಗವು ಮಹಾಪೌರ ಪ್ರೀತಿ ಕಾಮಕರ್ ಅವರಿಗೆ ಮನವಿ ಪತ್ರ ಸಲ್ಲಿಸಿತು.
ಸುಮಾರು 30 ವರ್ಷಗಳಿಂದ ಈ ನೌಕರರು ಜಲ ಮಂಡಳಿಯಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ನಂತರ ಎಲ್.ಆಂಡ್ ಟಿ ವ್ಯಾಪ್ತಿಯಲ್ಲಿ ಪಡೆದಾಗಲೂ ಸರಿಯಾಗಿ ವೇತನವನ್ನು ನೀಡುತ್ತಿರಲಿಲ್ಲ. ಎಲ್.ಆಂಡ್ ಟಿಗೆ ನೌಕರರನ್ನು ನೀಡುವಾಗ 2 ವರ್ಷ ಸೇವೆಯ ಬಳಿಕ ಬೆಳಗಾವಿ ಮಹಾನಗರ ಪಾಲಿಕೆಗೆ ಮರಳಿ ಬರಬೇಕೆಂಬ ಷರತ್ತನ್ನು ವಿಧಿಸಲಾಗಿತ್ತು. ಆದರೇ. ಎಲ್. ಆಂಡ್ ಟಿ ಇದನ್ನು ಉಲ್ಲಂಘಿಸಿ, ತೊಂದರೆಯನ್ನು ನೀಡುತ್ತಿದೆ. ಜಲ ಮಂಡಳಿಯ ನೌಕರರು ಹಗಲು ರಾತ್ರಿ ಸೇವೆಯನ್ನು ಸಲ್ಲಿಸುತ್ತಾರೆ. ಈಗಾಗಲೇ ಮಹಾಪೌರರಿಗೆ ಮನವಿಯನ್ನು ಸಲ್ಲಿಸಲಾಗಿದೆ. ಮಹಾಪೌರರು 2 ದಿನಗಳ ಅವಧಿಯನ್ನು ಬೇಡಿದ್ದಾರೆ. ಮಹಾನಗರ ಪಾಲಿಕೆ ಆಯುಕ್ತರು ಮತ್ತು ಎಲ್.ಆಂಡ್.ಟಿ ಜಂಟಿ ಸಭೆಯನ್ನು ನಡೆಸುವ ಭರವಸೆಯನ್ನು ನೀಡಿದ್ದಾರೆ ಎಂದು ದಲಿತ ಮುಖಂಡ ಮಲ್ಲೇಶ್ ಚೌಗಲೆ ಹೇಳಿದರು.
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುತ್ತಿಗೆ ಆಧಾರಿತ ನೌಕರರು ಭಾಗಿಯಾಗಿದ್ಧರು.
