Bagalkot

ಬಾಗಲಕೋಟೆಯಲ್ಲಿ ಮುಂಗಾರು ಮುನ್ನವೇ ನಕಲಿ ರಸಗೊಬ್ಬರ ಭೀತಿ: ಕೃಷಿ ಇಲಾಖೆ ಸಭೆಯಲ್ಲಿ ರೈತರ ಆಕ್ರೋಶ

Share

ನಾಡಿನಲ್ಲಿ ಮುಂಗಾರು ಹಂಗಾಮು ಶುರುವಾಗುತ್ತಿದೆ.ರೈತರು ಬಿತ್ತನೆಗೆ ಹೊಲ ಹದ ಮಾಡುತ್ತಿದ್ದಾರೆ.ಬೀಜ ಗೊಬ್ಬರ ಸಂಗ್ರಹಕ್ಕೆ ಮುಂದಾಗ್ತಿದ್ದಾರೆ.ಆದ್ರೆ ಆ ಒಂದು ಜಿಲ್ಲೆಯಲ್ಲಿ ಮಾತ್ರ ರಸಗೊಬ್ಬರ ವಿಷಯ ಬಂದಾಕ್ಷಣ ರೈತರು ಆತಂಕಪಡುವಂತಹ ಪರಿಸ್ಥಿತಿ ಎದುರಾಗಿದೆ.ಹಾಗಾದ್ರೆ ಅದ್ಯಾವ ಜಿಲ್ಲೆ? ರೈತರಲ್ಲಿರುವ ಆತಂಕವಾದ್ರೂ ಏನು ? ಇಲ್ಲಿದೆ ನೋಡಿ ಡಿಟೇಲ್ಸ್….

ರೈತರೊಂದಿಗೆ ನಡೆಯುತ್ತಿರವ ಕೃಷಿ ಇಲಾಖೆ ಅಧಿಕಾರಿಗಳ  ಸಭೆ.ಸಭೆಯಲ್ಲಿ ನಕಲಿ ಬೀಜ ಗೊಬ್ಬರ ಕೃತಕ ಅಭಾವ ಬಗ್ಗೆ ತಮ್ಮ ಆತಂಕ ಹೊರ ಹಾಕುತ್ತಿರುವ ರೈತರು. ರೈತರ ಸಮಸ್ಯೆ ನೀಗಿಸೋಕೆ ಮುಂದಾಗ್ತೀವಿ ಅನ್ನೋ ಅಧಿಕಾರಿಗಳ ಭರವಸೆ.ಇಂತಹ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆಯಲ್ಲಿ. ಮುಂಗಾರು ಈ ಬಾರಿ ಬೇಗನೆ ಬಂದಿದ್ದು, ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆಯಾಗ್ತಿದೆ.ರೈತರು ಬಿತ್ತನೆಗೆ ಹೊಲ ಹದ ಮಾಡ್ತಿದ್ದಾರೆ. ರೈತರ ಚಿತ್ತ ಇದೀಗ ಕೃಷಿ ಇಲಾಖೆಯ ರಸಗೊಬ್ಬರ ಸರಬರಾಜಿನತ್ತ ಎನ್ನುವಂತಾಗಿದೆ.ರಸಗೊಬ್ಬರ ವಿಷಯ ತೆಗೆದ್ರೆ ಸಾಕು ಜಿಲ್ಲೆಯ ರೈತರು ಆತಂಕಪಡುವ ಹಾಗಾಗಿದೆ.ಯಾಕಂದ್ರೆ ಕಳೆದ ಬಾರಿ ಜಿಲ್ಲೆಯಾದ್ಯಂತ ಕಳಪೆ ರಸಗೊಬ್ಬರ ಮಾರಾಟ ಕೇಸ್ ಹೆಚ್ಚಾಗಿ ಕಂಡು ಬಂದಿದ್ದವು, ಇದ್ರಿಂದ ಅದೆಷ್ಟೋ ರೈತರಿಗೂ ದೋಖಾ ಆಗಿತ್ತು. ಅಕ್ರಮ ದಾಸ್ತಾನು ಮತ್ತು ಕಳಪೆ ರಸಗೊಬ್ಬರ ಮಾರಾಟ ಸಂಬಂಧ ಬರೋಬ್ಬರಿ 18 ಕೇಸ್ ಆಗಿದ್ದು, 3 ಎಫ್.ಐ.ಆರ್ ಸಹ ಆಗಿದ್ದವು. ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯದಿಂದಲೂ ನಕಲಿ ರಸಗೊಬ್ಬರ ಮಾರಾಟ ನಡೆದಿತ್ತು.ಆದರೆ ಅದೇ ವಿಷಯ ಇದೀಗ ರೈತರನ್ನ ಬಾಧಿಸುತ್ತಿದ್ದು, ಇಂತಹ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಬೇಕು‌‌‌.ಆದರೆ ಕಡಿವಾಣ ಬೀಳುತ್ತಿಲ್ಲವೆಂದು ರೈತರು ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ.ಜೊತೆಗೆ ಗೊಬ್ಬರ ಬೀಜ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಮಾಡ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ 9 ತಾಲೂಕುಗಳ ರೈತರನ್ನ ಕರೆಯಿಸಿ ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರ ವಿಚಾರವಾಗಿ ಸಭೆ ನಡೆಸಿ ಚರ್ಚೆ ಸಹ ನಡೆಸಿದ್ರು, ಇದೇ ಸಭೆಯಲ್ಲಿ ರೈತರು ಅಕ್ರಮ ದಾಸ್ತಾನು ಮತ್ತು ನಕಲಿ ರಸಗೊಬ್ಬರ ಮಾರಾಟ ಸಂಭಂದ ಆತಂಕ ವ್ಯಕ್ತಪಡಿಸಿದರು, ಈ ನಡುವೆ ಕೃಷಿ ಇಲಾಖೆ  ರಸಗೊಬ್ಬರ ಸಂಗ್ರಹ ಮಾಹಿತಿ ನೀಡಿದ್ದು, ಮುಂಗಾರು ಹಂಗಾಮಿಗೆ ಬೇಕಿರುವಷ್ಟು ರಸಗೊಬ್ಬರ ಸಂಗ್ರಹ ಜಿಲ್ಲೆಯಲ್ಲಿ ಇಲ್ಲವಾಗಿದೆ. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ,
ಈ ಬಾರಿ ಅವಧಿಗೂ ಮುನ್ನ ಮುಂಗಾರು ಆಗಮನವಾಗಲಿದ್ದು, ಮೇ ೨೬ ಕ್ಕೆ ಮುಂಗಾರು ಆಗಮಿಸಲಿದೆ,  ಜಿಲ್ಲೆಯಲ್ಲಿ ೧ ಲಕ್ಷ ೨೦ ಸಾವಿರ ಮೆ ಟನ್ ವಿವಿಧ ರಸಗೊಬ್ಬರ ಅವಶ್ಯಕತೆ ಇದ್ದು, ಆದರೆ ಸದ್ಯ ಇರೋದು ಕೇವಲ ೫೫ ಸಾವಿರ ಮೆ ಟನ್ ಸಂಗ್ರಹ ಮಾತ್ರ. ಇಡೀ ಮುಂಗಾರಿಗೆ ಯೂರಿಯಾ ಒಂದೇ ೫೦ ಸಾವಿರ ಟನ್ ಬೇಕು, ಸದ್ಯ ಇರೋದು ೧೮ ಸಾವಿರ ಟನ್. ಈ ನಡುವೆ
ಡಿಎಪಿ ಕಾಂಪ್ಲೆಕ್ಸ್ ಎಮ್ ಒಬಿ ರಸಗೊಬ್ಬರಗಳಿಗೆ ೧೫೦ ಸೊಸೈಟಿ,೭೦೦ ಅಂಗಡಿಯಲ್ಲಿ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗಿದೆ. ನಕಲಿ ರಸಗೊಬ್ಬರ ಮಾರಾಟಕ್ಕೆ ಕಡಿವಾಣ ಹಾಕಲು ಇಬ್ಬರು ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ವಿಜಲೆನ್ಸ್ ಟೀಮ್ ರಚಿಸಿದ್ದು, ಯಾವುದೇ ದೂರಿಗೆ ಸ್ಪಂದನೆ ಸಿಗಲಿದೆ, ಈ ನಡುವೆ ರೈತರು ಸಹ ಜಾಗೃತಿಯಿಂದ ರಸಗೊಬ್ಬರ ಖರೀದಿಗೆ ಮುಂದಾಗಬೇಕು ಅಂತಿದ್ದಾರೆ ಕೃಷಿ ಅಧಿಕಾರಿಗಳು.

ಒಟ್ಟಿನಲ್ಲಿ ಮುಂಗಾರು ಹಂಗಾಮು ಶುರುವಾದ ಬೆನ್ನಲ್ಲೆ ಬಾಗಲಕೋಟೆ ಜಿಲ್ಲೆಯ ರೈತರಲ್ಲಿ ನಕಲಿ ರಸಗೊಬ್ಬರದ ಆತಂಕ ಎದುರಾಗಿದೆ.ಇದಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಈ ಬಾರಿ ಎಷ್ಟರಮಟ್ಟಿಗೆ ಸೂಕ್ತ ಕ್ರಮಕ್ಕೆ ಮುಂದಾಗ್ತಾರೆ ನೋಡಬೇಕು.

Tags:

error: Content is protected !!