ಬೆಳಗಾವಿಯಲ್ಲಿ ಭಾರಿ ಸಂಚಲನ ಮೂಡಿಸಿದ್ದ 4,500 ಕೋಟಿ ರೂಪಾಯಿ ಠೇವಣಿದಾರರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ತೀವ್ರಗೊಂಡಿತ್ತು. ಮುಖ್ಯ ಆರೋಪಿ ಶಿವಾನಂದ ನೀಲಣ್ಣವರ ಕಡೆಯಿಂದ ಐಷಾರಾಮಿ ಕಾರು ಉಡುಗೊರೆ ಪಡೆದಿದ್ದ ಆರೋಪದ ಮೇಲೆ, ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಆರ್. ಅಭಿಲಾಷ್ ಮಂಗಳವಾರ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿ ಸುದೀರ್ಘ ವಿಚಾರಣೆ ಎದುರಿಸಿದರು.

ಸಾರ್ವಜನಿಕರ ಕೋಟ್ಯಂತರ ರೂಪಾಯಿ ಹಣವನ್ನು ವಂಚಿಸಿದ ಆರೋಪ ಹೊತ್ತಿರುವ ಶಿವಾನಂದ ನೀಲಣ್ಣವರ ಪ್ರಕರಣದ ತನಿಖೆಯನ್ನು ಸಿಐಡಿ ತಂಡ ತೀವ್ರಗೊಳಿಸಿತ್ತು. ಇದರ ಭಾಗವಾಗಿ, ಬೆಳಗಾವಿ ಉತ್ಸವದ ಹೆಸರಿನಲ್ಲಿ ಠೇವಣಿದಾರರ ಹಣವನ್ನು ಬಳಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಆರ್. ಅಭಿಲಾಷ್ ಅವರಿಗೆ ಸಿಐಡಿ ಡಿವೈಎಸ್ಪಿ ಈ ಹಿಂದೆ ನೋಟಿಸ್ ಜಾರಿಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಮಾಳಮಾರುತಿ ಪೊಲೀಸ್ ಠಾಣೆಗೆ ಆಗಮಿಸಿದ್ದ ಸಿಐಡಿ ವಿಶೇಷ ತಂಡದ ಮುಂದೆ ಅಭಿಲಾಷ್ ವಿಚಾರಣೆಗೆ ಹಾಜರಾಗಿದ್ದರು. ತನಿಖೆಯ ವೇಳೆ ಮುಖ್ಯ ಆರೋಪಿ ಶಿವಾನಂದ ನೀಲಣ್ಣವರ, ಬೆಳಗಾವಿ ಉತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಮುಗಿದ ನಂತರ ಸುಮಾರು 17 ಲಕ್ಷ ರೂಪಾಯಿ ಮೌಲ್ಯದ ಸೆಕೆಂಡ್ ಹ್ಯಾಂಡ್ ಮರ್ಸಿಡಿಸ್ ಕಾರನ್ನು ಅಭಿಲಾಷ್ಗೆ ಉಡುಗೊರೆಯಾಗಿ ನೀಡಿದ್ದ ಸಂಗತಿ ಪತ್ತೆಯಾಗಿತ್ತು.

ಹೀಗಾಗಿ ಕಾರಿನ ಖರೀದಿ ಹಾಗೂ ಅದರ ಮಾಲೀಕತ್ವಕ್ಕೆ ಸಂಬಂಧಿಸಿದ ಎಲ್ಲಾ ಅಸಲಿ ದಾಖಲೆಗಳೊಂದಿಗೆ ಬರುವಂತೆ ಸಿಐಡಿ ಅಧಿಕಾರಿಗಳು ಅಭಿಲಾಷ್ಗೆ ಕಡಕ್ ಸೂಚನೆ ನೀಡಿದ್ದರು. ಅದರಂತೆ ಮಂಗಳವಾರ ಮಾಳಮಾರುತಿ ಠಾಣೆಗೆ ದಾಖಲೆಗಳ ಸಮೇತ ಬಂದಿದ್ದ ಅಭಿಲಾಷ್ ಅವರನ್ನು ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿ, ಹಣಕಾಸಿನ ವ್ಯವಹಾರಗಳು ಮತ್ತು ಐಷಾರಾಮಿ ಕಾರಿನ ಹಿನ್ನೆಲೆಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದರು. ಇದೇ ವೇಳೆ ಪ್ರಕರಣದ ಪ್ರಮುಖ ಆರೋಪಿ ಶಿವಾನಂದ ನೀಲಣ್ಣವರ ಪತ್ನಿ ಹಾಗೂ ಪಾಲುದಾರ ಸುಭಾಷ್ಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿತ್ತು. ತನಿಖೆ ಮುಕ್ತಾಯದ ಹಂತಕ್ಕೆ ತಲುಪಿದ್ದರಿಂದ, ಅತ್ತ ಮುಖ್ಯ ಆರೋಪಿ ಶಿವಾನಂದ ನೀಲಣ್ಣವರನ್ನು ಬುಧವಾರವೇ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿಐಡಿ ಸರ್ವ ಸಿದ್ಧತೆ ಮಾಡಿಕೊಂಡಿತ್ತು.
