ಧಾರವಾಡದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಭೀಕರ ಗುಂಡಿನ ದಾಳಿ ನಡೆದಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ದುಷ್ಕರ್ಮಿಗಳು ಫೈರಿಂಗ್ ನಡೆಸಿದ್ದು, ಸದ್ಯ ಗಾಯಾಳು ಯುವಕನನ್ನು ಎಸ್.ಡಿ.ಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಧಾರವಾಡ ಹೊರವಲಯದ ತಡಸಿನಕೊಪ್ಪ ಬಳಿ ಇರುವ IIIT (ತ್ರಿಪಲ್ ಐಟಿ) ಸಮೀಪ ಜಮೀನು ವಿಚಾರವಾಗಿ ನಡೆದ ಗಲಾಟೆ ತಾರಕಕ್ಕೇರಿ, ಯುವಕನೊಬ್ಬನ ಮೇಲೆ ಗುಂಡಿನ ದಾಳಿ ನಡೆದಿರುವ ಆಘಾತಕಾರಿ ಘಟನೆ ಸಂಭವಿಸಿದೆ. ವಿಠ್ಠಲ ವಾಲಿಕಾರ (24) ಎಂಬ ಯುವಕ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಜಮೀನಿನ ಹಳೆಯ ವ್ಯಾಜ್ಯವನ್ನು ಬಗೆಹರಿಸಲು ಗ್ರಾಮದ ಮುಖಂಡರು ಸ್ಥಳದಲ್ಲಿ ಜಮಾಯಿಸಿ ಮಾತುಕತೆ ನಡೆಸುತ್ತಿದ್ದರು. ಆದರೆ, ಈ ವೇಳೆ ಉಭಯ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ತೀವ್ರ ವಿಕೋಪಕ್ಕೆ ತಿರುಗಿದೆ. ಇದೇ ಸಂದರ್ಭವನ್ನು ಬಳಸಿಕೊಂಡ ದುಷ್ಕರ್ಮಿಗಳು ಇದ್ದಕ್ಕಿದ್ದಂತೆ ಯುವಕ ವಿಠ್ಠಲನ ಕಾಲಿಗೆ ಗುಂಡು ಹೊಡೆದು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಯುವಕನನ್ನು ತಕ್ಷಣವೇ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಸದ್ಯ ಘಟನೆ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಇನ್ನು ಘಟನೆ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ತಕ್ಷಣವೇ ಎಸ್.ಡಿ.ಎಂ ಆಸ್ಪತ್ರೆಗೆ ತುರ್ತು ಭೇಟಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನ ಆರೋಗ್ಯದ ಸ್ಥಿತಿಯನ್ನು ವೈದ್ಯರಿಂದ ವಿಚಾರಿಸಿದ ಕಮಿಷನರ್, ಘಟನೆಗೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿಯನ್ನು ಕಲೆಹಾಕಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ, ಅದೂ ಮುಖಂಡರ ಸಮ್ಮುಖದಲ್ಲೇ ಇಂತಹ ಸಶಸ್ತ್ರ ದಾಳಿ ನಡೆಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ತಪ್ಪಿತಸ್ಥರನ್ನು ಬಂಧಿಸಲು ಪೊಲೀಸರು ಜಾಲ ಬೀಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯಾಗಿರಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
