Kagawad

ಅಂತರರಾಷ್ಟ್ರೀಯ ಅಲಯನ್ಸ್ ಕ್ಲಬ್ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Share

ಅಂತರರಾಷ್ಟ್ರೀಯ ಅಲಯನ್ಸ್ ಕ್ಲಬ್ ಸಮಾಜಸೇವೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದು, ಪ್ರಕೃತಿಯಲ್ಲಿ ಉಂಟಾಗುತ್ತಿರುವ ಹವಾಮಾನ ವೈಪರಿತ್ಯ ತಡೆಗಟ್ಟಲು ಪ್ರತಿಯೊಬ್ಬರೂ ಸಸಿ ನೆಟ್ಟು ಪರಿಸರ ಉಳಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಅಲಯನ್ಸ್ ಕ್ಲಬ್‌ನ ಸೌಥ ಮಲ್ಟಿಪಲ್ ಕೌನ್ಸಿಲ್ ಚೇರ್ಮನ್ ಅಲೈ ಮೋರಾ ಅಂಜಯ್ಯ ಕರೆ ನೀಡಿದ್ದಾರೆ.

ಅಥಣಿಯ ಪಂಜುರ್ಲಿ ರೆಸ್ಟೋರೆಂಟ್ ಸಭಾಭವನದಲ್ಲಿ ಅಲಯನ್ಸ್ ಕ್ಲಬ್ ಬೆಳಗಾವಿ-೧೩೧ ಅಥಣಿ ಶಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕ ಪಡೆದು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಅಥಣಿ ತಾಲೂಕಿನ ಕಟಗೇರಿ ಗ್ರಾಮದ ರೈತನ ಮಗಳು ಪ್ರಾರ್ಥನಾ ನಾಗಪ್ಪ ಬಿರಾದಾರ್ ಪಾಟೀಲ್ ಹಾಗೂ ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಸವದಿ ಗ್ರಾಮದ ರೈತನ ಮಗ ಬಸವರಾಜ ದರಿಯಪ್ಪ ಕೆಂಪವಾಡ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ಹಾಗೂ ಉಸ್ತುವಾರಿಗಳಾದ ನ್ಯಾಯವಾದಿ ರತ್ನಾಕರ್ ಶೆಟ್ಟಿ ಮತ್ತು ಕರ್ನಾಟಕ ರಾಜ್ಯ ನಿರ್ದೇಶಕರಾದ ಹಿರಿಯ ನ್ಯಾಯವಾದಿ ಕೆ.ಎಲ್. ಕುಂದರಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನ್ಯಾಯವಾದಿ ರತ್ನಾಕರ್ ಶೆಟ್ಟಿ ಅವರು ಅಥಣಿ ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆಯನ್ನು ಕೊಂಡಾಡಿ, ಇದು ಪ್ರತಿಭಾವಂತರ ತಾಲೂಕು ಎಂದು ಅಭಿಪ್ರಾಯಪಟ್ಟರು.

ಗ್ರಾಮೀಣ ಹಿನ್ನೆಲೆಯಿಂದ ಬಂದ ಪ್ರಾರ್ಥನಾ ಬಿರಾದಾರ್ ಪಾಟೀಲ್ ಹಾಗೂ ಬಸವರಾಜ ಕೆಂಪವಾಡ ಅವರ ಸಾಧನೆಗೆ ಪೋಷಕರ ತ್ಯಾಗ ಮತ್ತು ಪ್ರೋತ್ಸಾಹವೇ ಕಾರಣ ಎಂದು ಶ್ಲಾಘಿಸಿ, ವಿದ್ಯಾರ್ಥಿಗಳ ಪೋಷಕರನ್ನು ಗೌರವಿಸಿದರು.
ಈ ವೇಳೆ ಸಂಸ್ಥೆಯ ಪದಾಧಿಕಾರಿಗಳಾದ ಡಾ. ನವೀನಾ ಶೆಟ್ಟಿಗಾರ, ಮಾಜಿ ಜಿಲ್ಲಾ ಗವರ್ನರ್ ಬಸವರಾಜ ಕೋಳಿ, ಡಾ. ಡಿ.ಎಮ್.ಬೆನ್ನೂರ, ಎಸ್.ಪಿ.ಜೈನಾಪೂರ, ಧನ್ಯಕುಮಾರ ಪಾಟೀಲ, ಇಂಜಿನಿಯರ್ ರಮೇಶ್ ಹೆಡಗೆ, ನ್ಯಾಯವಾದಿ ರೂಪಾ ಪಾಟೀಲ, ರಾಜಕಿಶೋರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಹೊಸ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ ಬರುವ ವರ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡುವ ಸಂಕಲ್ಪ ಕೈಗೊಳ್ಳಲಾಯಿತು.

Tags:

error: Content is protected !!