ಕಾಗವಾಡ ತಾಲೂಕಿನ ಸುಕ್ಷೇತ್ರ ಕವಲಗುಡ್ಡದಲ್ಲಿ ಗಾನಗಾರುಡಿಗ, ಕವಿಮುನಿತಿಲಕ ಪ್ರೋ.ಬ್ರ. ಸದ್ಗುರು ಶ್ರೀ ಸಿದ್ಧರತ್ನ ಮದಗೊಂಡೇಶ್ವರ ಅಪ್ಪಾಜಿಯವರ ೧೬ನೇ ಗುರುಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ “ಕನಕ-ಬಸವ ಭಾವಬೆಳಕು” ಹಾಗೂ “ಭಕ್ತಿಯ ಕರೆಯೋಲೆ” ಕಾರ್ಯಕ್ರಮಗಳ ಸಮಾರೋಪ ಸಮಾರಂಭವು ಅತ್ಯಂತ ಭಕ್ತಿಭಾವದಿಂದ ಜರುಗಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸುಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಕವಲಗುಡ್ಡ ಸಿದ್ದಯೋಗ ಮಠದ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಸಮಾಜದಲ್ಲಿ ಮೌಲ್ಯಾಧಾರಿತ ಬದುಕು ರೂಪಿಸುವಲ್ಲಿ ಮಠದ ಕೊಡುಗೆ ಅಪಾರವಾಗಿದ್ದು, ಈ ಸೇವೆ ನಿರಂತರವಾಗಿ ಮುಂದುವರಿಯಲು ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಮಠದ ಭವನ ನಿರ್ಮಾಣಕ್ಕಾಗಿ ಶೀಘ್ರದಲ್ಲೇ ಒಂದು ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಲ್ಲದೆ, ಗಣ್ಯರ ಉಪಸ್ಥಿತಿಯಲ್ಲಿ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಮಾತನಾಡಿ, ಪೂಜ್ಯ ಅಪ್ಪಾಜಿಯವರು ಕೇವಲ ತಾಲೂಕಿಗೆ ಸೀಮಿತವಾಗದೆ ಇಡೀ ರಾಜ್ಯಕ್ಕೆ ಮೌಲ್ಯಾಧಾರಿತ ಸಂದೇಶ ನೀಡುತ್ತಿದ್ದಾರೆ ಎಂದು ಬಣ್ಣಿಸಿದರು. ಕವಲಗುಡ್ಡ ಭಾಗದ ನಾಲ್ಕು ಗ್ರಾಮಗಳ ನೀರಿನ ಸಮಸ್ಯೆ ನಿವಾರಣೆಗೆ ಸುಮಾರು ೪೦ ಕೋಟಿ ರೂ. ಅನುದಾನದ ಅಗತ್ಯವಿದ್ದು, ಮುಖ್ಯಮಂತ್ರಿಗಳು ಈ ಯೋಜನೆಗೆ ಸಹಕರಿಸುವಂತೆ ಅವರು ಮನವಿ ಮಾಡಿದರು. ಇದೇ ವೇಳೆ ಚಿಕ್ಕೋಡಿ-ಸದಲಗಾ ಶಾಸಕ ಗಣೇಶ ಹುಕ್ಕೇರಿ ಅವರು ಮಠದ ನಿಸ್ವಾರ್ಥ ಸೇವೆಯನ್ನು ಕಂಡು ತಮ್ಮ ಕ್ಷೇತ್ರದಲ್ಲಿ ಇಂತಹ ಆಧ್ಯಾತ್ಮಿಕ ಕೇಂದ್ರ ಬೆಳೆಯಲು ಐದು ಎಕರೆ ಭೂಮಿ ನೀಡುವುದಾಗಿ ಘೋಷಿಸಿದರು. ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಹಾಗೂ ಬೆಳಗಾವಿ ಕಾಡಾ ಅಧ್ಯಕ್ಷ ಲಕ್ಷ್ಮಣ ಚಿಂಗಳೆ, ಬಸವರಾಜ ಬಸಳಿಗುಂಡಿ, ಸುರೇಶ್ ಮಾಯಣ್ಣವರ, ಸತ್ಯಪ್ಪ ಬಾಗೇನವರ್, ವಿನಾಯಕ್ ಬಾಗಡಿ ಸೇರಿದಂತೆ ಅನೇಕ ಮುಖಂಡರು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಸಮಾರೋಪದ ದಿವ್ಯ ಸಾನಿಧ್ಯವನ್ನು ಶಿರವಾರದ ಪ.ಪೂ. ಶ್ರೀ ಸೋಮಲಿಂಗೇಶ್ವರ ಪಟ್ಟದ ದೇವರು, ಪ.ಪೂ. ಶ್ರೀ ಅಭಿನವ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು, ಶ್ರೀ ಸಿದ್ದಲಿಂಗೇಶ್ವರ ಆಶ್ರಮದ ಸ್ವಾಮೀಜಿಗಳು, ಜಮಖಂಡಿಯ ಕೃಷ್ಣಾನಂದ ಸ್ವಾಮೀಜಿ, ಉಮ್ರಾಣಿಯ ಅಕ್ಕಮಹಾದೇವಿ ಮಾತಾಜಿ ಹಾಗೂ ಮರಗುಂಡೇಶ್ವರ ಮಹಾರಾಜರು ವಹಿಸಿದ್ದರು. ಹಿರಿಯ ಸಾಹಿತಿ ವೀರೇಶ್ ಪಾಟೀಲ್ ಅವರು ಕನಕದಾಸರು ಹಾಗೂ ಬಸವಣ್ಣನವರ ಸಂದೇಶಗಳ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ “ಶೇ.ಪ್ರ. ಸದ್ಗುರು ಶ್ರೀ ಸಿದ್ಧರತ್ನ ಮದಗೊಂಡೇಶ್ವರ ಸದ್ಭಾವನಾ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಸನ್ಮಾನಿತರಲ್ಲಿ ಡಾ. ಶಿವಪ್ಪ ಅಜ್ಜನಗಿ, ಲಕ್ಷ್ಮಣ ನಿಂಗಾಗೋಳ, ವಿಠ್ಠಲ ಬನ್ನೆ, ಭೀಮರಾವ ಘಂಟಿ, ತುಕಾರಾಮ ವಂಟಗೋಡಿ, ಮಹಾಂತೇಶ ಮಂಗಳೂರು ಹಾಗೂ ಸಮಾಜಸೇವಕ ಪ್ರಕಾಶ ಪೂಜಾರಿ ಸೇರಿದ್ದಾರೆ. ನಾಲ್ಕು ದಿನಗಳ ಈ ಉತ್ಸವದಲ್ಲಿ ರೈತ ಕುಟುಂಬಗಳ ಪಾದಪೂಜೆ ಹಾಗೂ ಹಿರಿಯ ಪೋಷಕರ ಪಾದಪೂಜೆಯನ್ನು ಮಕ್ಕಳಿಂದಲೇ ನೆರವೇರಿಸುವ ಮೂಲಕ ಮಠವು ಕೌಟುಂಬಿಕ ಮೌಲ್ಯಗಳನ್ನು ಸಾರುವ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು
