• ಪದ್ಮಾವತಿ ಮಂದಿರಕ್ಕೆ ಭೇಟಿ ನೀಡಿದ ಮಾಜಿ ಡಿಸಿಎಂ
• ಪರಿಸರ ಅಭಿವೃದ್ಧಿಗೆ ಸ್ವಂತ ಹಣದಿಂದ ನೆರವು
• ಸಭಾ ಭವನ, ಯಾತ್ರಿ ನಿವಾಸ ವೀಕ್ಷಿಸಿ ಶ್ಲಾಘನೆ
• ಸೋಂದಾ ಶ್ರೀಗಳಿಂದ ಲಕ್ಷ್ಮಣ್ ಸವದಿಗೆ ಆಶೀರ್ವಾದ

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಜೈನ ಸಮಾಜದ ಮುನಿ ಮಹಾರಾಜರು ಅಹಿಂಸಾ ತತ್ವಗಳನ್ನು ಸಾರುತ್ತಾ ಧರ್ಮ ಪ್ರಸಾರ ಮಾಡುತ್ತಿದ್ದಾರೆ. ಇದೊಂದು ಪವಿತ್ರ ಧರ್ಮ. ಉಗಾರದ ಶ್ರೀ ಪದ್ಮಾವತಿ ಮಂದಿರವು ಅತಿಶಯ ಕ್ಷೇತ್ರವಾಗಿದ್ದು, ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಈ ಮಂದಿರದ ಪರಿಸರದ ಅಭಿವೃದ್ಧಿಗಾಗಿ ನಾನು ಸ್ವಂತ 5 ಲಕ್ಷ ರೂಪಾಯಿ ದೇಣಿಗೆ ನೀಡುತ್ತೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಉಗಾರದಲ್ಲಿ ಹೇಳಿದರು.
ಗುರುವಾರದಂದು ಉಗಾರದ ಶ್ರೀ ಪದ್ಮಾವತಿ ಮಂದಿರಕ್ಕೆ ಆಗಮಿಸಿದ ಅವರು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಆರಾಧನಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಭಕ್ತರಿಗಾಗಿ ನಿರ್ಮಿಸಲಾಗಿರುವ ಯಾತ್ರಿ ನಿವಾಸ ಹಾಗೂ ಭವ್ಯ ಸಭಾ ಭವನವನ್ನು ವೀಕ್ಷಿಸಿ ಅವರು ಸಂತಸ ವ್ಯಕ್ತಪಡಿಸಿದರು.

ಎಲ್ಲ ಸದ್ಭಕ್ತರು ಒಂದುಗೂಡಿ ಇಂತಹ ಭವ್ಯ ಸಭಾ ಭವನ ಹಾಗೂ ಯಾತ್ರಿ ನಿವಾಸವನ್ನು ಕಟ್ಟಿಸಿದ್ದೀರಿ. ಇದರ ಉಳಿದ ಕಾಮಗಾರಿಗಳಿಗಾಗಿ ನಾನು 5 ಲಕ್ಷ ರೂಪಾಯಿ ನೀಡುತ್ತೇನೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಸೋಂದಾ ಜೈನ ಮಠದ ಜಗದ್ಗುರು ಭಟ್ಟಾಕಲಂಕ ಸ್ವಾಮೀಜಿಯವರು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರಿಗೆ ಆಶೀರ್ವದಿಸಿ, ಆರಾಧನಾ ಮಹೋತ್ಸವದ ಬಗ್ಗೆ ಮಾಹಿತಿ ನೀಡಿದರು. ಪದ್ಮಾವತಿ ಮಂದಿರದ ಧರ್ಮದರ್ಶಿ ಶೀತಲಗೌಡ ಪಾಟೀಲ್ ಮಾತನಾಡಿ, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರು ಪದ್ಮಾವತಿ ದೇವಿಯ ಭಕ್ತರು. ಅವರು 5 ಲಕ್ಷ ರೂಪಾಯಿ ನೀಡುವ ಘೋಷಣೆ ಮಾಡಿದ್ದನ್ನು ಶ್ಲಾಘಿಸಿ, ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಅಥಣಿ ಪುರಸಭೆ ಸದಸ್ಯ ರಾಜು ಗುಡೂಡಗಿ, ಅಭಿಯಂತರರಾದ ಆದೇಶ ಹೊಸವಾಡೆ, ವಜ್ರಕುಮಾರ್ ಮಗದುಮ, ಸುನಿಲ್ ಪಡನಾಡ, ವೃಷಭ ಪಾಟೀಲ್, ಕೇಡಬಾಳ ಪಿಕೆಪಿಎಸ್ ಸದಸ್ಯ ಶೀತಲ್ ಹೇರಲೆಕರ್ ಸೇರಿದಂತೆ ಪದ್ಮಾವತಿ ಸೇವಾ ಸಮಿತಿಯ ಎಲ್ಲ ಸದಸ್ಯರು, ಪದ್ಮಾವತಿ ಮಹಿಳಾ ಮಂಡಳದ ಶ್ರಾವಕ-ಶ್ರಾವಿಕೆಯರು ಪಾಲ್ಗೊಂಡಿದ್ದರು.
