ಮೈಸೂರಿನಲ್ಲಿ ಸಿಎಂ ಸಿದ್ಧರಾಮಯ್ಯನವರನ್ನು ಭೇಟಿಯಾದ ರಾಜಣ್ಣ

ಸಿಎಂ ರೇಸನಲ್ಲಿ ನಮ್ಮಲ್ಲಿ ಸುಮಾರು 1 ಡಜನ್ ಆಕಾಂಕ್ಷಿಗಳಿದ್ದಾರೆ…

ಡಿಕೆಶಿ ಆಶಾಭಾವನೆಯಲ್ಲಿಲ್ಲ ಯಾವುದೇ ತಪ್ಪು
ಹೈಕಮಾಂಡ್ ಶೀಘ್ರದಲ್ಲೇ ತಿರ್ಮಾನಿಸಲಿ; ಕೆ.ಎನ್. ರಾಜಣ್ಣ
ರಾಜ್ಯ ಕಾಂಗ್ರೆಸ್‌ನಲ್ಲಿ ಪಟ್ಟದ ಪಗಡಿಯಾಟ ತೀವ್ರಗೊಂಡಿದೆ. ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಮಾಜಿ ಸಚಿವ ಕೆ.ಎನ್. ರಾಜಣ್ಣ, ನಾಯಕತ್ವ ಬದಲಾವಣೆ ಕುರಿತಾದ ಗೊಂದಲಗಳಿಗೆ ಹೈಕಮಾಂಡ್ ಶೀಘ್ರವೇ ತೆರೆ ಎಳೆಯಬೇಕು ಎಂದು ಹೇಳಿಕೆ ನೀಡುವ ಮೂಲಕ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ರಾಜ್ಯದಲ್ಲಿ ಪಟ್ಟದ ಪಗಡಿಯಾಟ ಜೋರಾಗಿ ನಡೆಯುತ್ತಿದ್ದು, ಸಿಎಂ ಸಿದ್ಧರಾಮಯ್ಯ ಅವರನ್ನು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಮೈಸೂರಿನಲ್ಲಿ ಭೇಟಿಯಾಗಿ ಮಾತುಕತೆಯನ್ನು ನಡೆಸಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೆ. ಎನ್. ರಾಜಣ್ಣ ಅವರು ಸಿಎಂ ಬದಲಾಗುತ್ತಾರೆ ಎಂದು ನಾನು ಹೇಳಲ್ಲ. ಇರ್ತಾರೆ ಅಂತಲೂ ನಾನು ಹೇಳಲ್ಲ. ಹೈಕಮಾಂಡ್ ಅತಿ ಬೇಗ ನಿರ್ಧಾರವನ್ನು ಕೈಗೊಳ್ಳಲಿ. ನಿರ್ಧಾರಗಳು ತಡವಾದಷ್ಟು ಪಕ್ಷದ ಮೇಲೆ ಪರಿಣಾಮ ಬೀರುತ್ತದೆ. ಸರ್ಕಾರದ ಮೇಲೂ ಕೂಡ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಇನ್ನು ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರಿಗೆ ಶುಭ ಸುದ್ಧಿ ಸಿಗುತ್ತಾ ಎಂಬ ಪ್ರಶ್ನೆಗೆ ಮನುಷ್ಯ ಯಾವತ್ತೂ ಆಶಾವಾದಿಯಾಗಿರಬೇಕು. ಇದರಲ್ಲಿ ತಪ್ಪೇನಿದೆ. ಸಿಎಂ ಸ್ಥಾನಕ್ಕೆ ಸುಮಾರು 1 ಡಜನ್ ಆಕಾಂಕ್ಷಿಗಳಿದ್ದಾರೆ. ಡಿ.ಕೆ.ಶಿ ಅಧ್ಯಕ್ಷರಾಗಿರುವುದರಿಂದ ಹೆಚ್ಚು ಆಸೆ ಪಡುತ್ತಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದರು. ಇನ್ನು ಸಿದ್ಧರಾಮಯ್ಯ ಅವರನ್ನು ಬದಲಾವಣೆ ಮಾಡಿದರೇ ತಡೆದುಕೊಳ್ಳುವ ಶಕ್ತಿ ಕಾಂಗ್ರೆಸ್ಸಿಗಿದೆಯಾ ಎಂಬ ಪ್ರಶ್ನೆಗೆ ಎಲ್ಲವನ್ನು ನೋಡಿಕೊಂಡು ಹೈಕಮಾಂಡ್ ಅಂತಿಮ ನಿರ್ಣಯವನ್ನು ಕೈಗೊಳ್ಳಲಿದೆ ಎಂದರು.
