ಬಡವರ ಹೊಟ್ಟೆಗೆ ಸೇರಬೇಕಿದ್ದ ‘ಅನ್ನಭಾಗ್ಯ’ದ ಅಕ್ಕಿ ಕಾಳಸಂತೆಯ ಪಾಲಾಗುತ್ತಿರುವುದು ಮತ್ತೆ ಸಾಬೀತಾಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಬರೋಬ್ಬರಿ 40 ಮೂಟೆ ಪಡಿತರ ಅಕ್ಕಿಯನ್ನು ಅಧಿಕಾರಿಗಳು ಸಿನಿಮೀಯ ಶೈಲಿಯಲ್ಲಿ ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಆಯಿಸಾ ಕಾಲೋನಿಯಲ್ಲಿ ಗುಪ್ತವಾಗಿ ನಡೆಯುತ್ತಿದ್ದ ಅಕ್ರಮ ಪಡಿತರ ಅಕ್ಕಿ ದಂಧೆಯನ್ನು ಆಹಾರ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಖಚಿತ ಮಾಹಿತಿ ಮೇರೆಗೆ ಜಮಖಂಡಿ ತಹಶೀಲ್ದಾರ್ ಅನಿಲ್ ಬಡಿಗೇರ್ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳ ತಂಡ ಜಂಟಿಯಾಗಿ ಮನೆಯೊಂದರ ಮೇಲೆ ದಾಳಿ ನಡೆಸಿದಾಗ, ಭಾರಿ ಪ್ರಮಾಣದ ಅಕ್ಕಿ ಸಂಗ್ರಹ ಬೆಳಕಿಗೆ ಬಂದಿದೆ. ಸುಮಾರು 40 ಮೂಟೆಗಳಷ್ಟು ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಅಧಿಕಾರಿಗಳ ಈ ಕಾರ್ಯಾಚರಣೆ ದಂಧೆಕೋರರಲ್ಲಿ ನಡುಕ ಹುಟ್ಟಿಸಿದೆ.
ದಾಳಿ ವೇಳೆ ದಂಧೆಕೋರರ ಚಾಣಾಕ್ಷತನ ಕಂಡು ಅಧಿಕಾರಿಗಳೇ ದಸ್ತಗಿರಿಯಾಗಿದ್ದಾರೆ. ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಲು ಪಡಿತರ ಅಕ್ಕಿಯನ್ನು ಗೊಬ್ಬರದ ಚೀಲಗಳಲ್ಲಿ ತುಂಬಿ ಅತ್ಯಂತ ಸುರಕ್ಷಿತವಾಗಿ ಇಡಲಾಗಿತ್ತು. ಮೇಲ್ನೋಟಕ್ಕೆ ಗೊಬ್ಬರದ ಚೀಲಗಳಂತೆ ಕಂಡರೂ, ಬಿಚ್ಚಿ ನೋಡಿದಾಗ ಒಳಗಡೆ ಅನ್ನಭಾಗ್ಯ ಯೋಜನೆಯ ಅಕ್ಕಿ ಇರುವುದು ಪತ್ತೆಯಾಗಿದೆ. ಸದ್ಯ ಜಪ್ತಿ ಮಾಡಲಾದ ಅಕ್ಕಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಸರ್ಕಾರದ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಜಾಲದ ವಿರುದ್ಧ ತನಿಖೆ ಚುರುಕುಗೊಳಿಸಿದ್ದಾರೆ.
ಈ ಅಕ್ರಮ ಸಂಗ್ರಹದ ಹಿಂದೆ ಯಾರಿದ್ದಾರೆ? ಆ ಮನೆ ಯಾರಿಗೆ ಸೇರಿದ್ದು? ಮತ್ತು ಇಷ್ಟೊಂದು ಪ್ರಮಾಣದ ಅಕ್ಕಿಯನ್ನು ಎಲ್ಲಿಂದ ತರಲಾಗಿತ್ತು ಎಂಬ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಜಮಖಂಡಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ದಂಧೆಯ ಕಿಂಗ್‌ಪಿನ್ ಪತ್ತೆಗಾಗಿ ಪೊಲೀಸರು ಹಾಗೂ ಆಹಾರ ಇಲಾಖೆ ಜಂಟಿ ತನಿಖೆ ಕೈಗೊಂಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
