Bagalkot

ಬಾಗಲಕೋಟೆ: ಸಿಮೆಂಟ್ ಫ್ಯಾಕ್ಟರಿ ಧೂಳಿನ ಅಟ್ಟಹಾಸ; ನರಕವಾಗುತ್ತಿದೆ ನಾಗನಾಪುರ-ಲೋಕಾಪುರ!

Share

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಾಗನಾಪುರ ಮತ್ತು ಲೋಕಾಪುರದ ಜನರಿಗೆ ಈಗ ಉಸಿರಾಡುವುದೇ ಕಷ್ಟವಾಗಿದೆ. ಅಭಿವೃದ್ಧಿಯ ಹೆಸರಲ್ಲಿ ತಲೆ ಎತ್ತಿರುವ ಸಿಮೆಂಟ್ ಕಾರ್ಖಾನೆಗಳು ಜನರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿವೆ. ಅಧಿಕಾರಿಗಳ ನಿರ್ಲಕ್ಷ್ಯದ ಬೆನ್ನಲ್ಲೇ ಕಣ್ಮುಚ್ಚಿ ಕುಳಿತಿರುವ ವ್ಯವಸ್ಥೆಯ ವಿರುದ್ಧ ಜನ ಈಗ ಕೆರಳಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಾಗನಾಪುರ ಹಾಗೂ ಲೋಕಾಪುರ ಪಟ್ಟಣದ ಜನರಿಗೆ ಸಿಮೆಂಟ್ ಕಾರ್ಖಾನೆಯ ಕರಿ ಧೂಳು ಜೀವ ಹಿಂಡುತ್ತಿದೆ. ಗ್ರಾಮಕ್ಕೆ ಅಂಟಿಕೊಂಡೇ ಇರುವ ಕೇಶವ ಸಿಮೆಂಟ್ ಕಾರ್ಖಾನೆ ಹಾಗೂ ನೂರಾರು ಸುಣ್ಣದ ಬಟ್ಟಿಗಳು ಹೊರಸೂಸುವ ವಿಷಕಾರಿ ಧೂಳಿನಿಂದಾಗಿ ರೈತರು ಬೆಳೆದ ಕಬ್ಬು, ಜೋಳ, ಮೆಕ್ಕೆಜೋಳ ಹಾಗೂ ಗೋಧಿ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ. ಬೆಳೆಗಳ ಮೇಲೆ ಧೂಳಿನ ದಪ್ಪ ಪದರವೇ ನಿರ್ಮಾಣವಾಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಅಷ್ಟೇ ಅಲ್ಲದೆ, ಅತಿಯಾದ ಕಲ್ಲು ಕ್ವಾರಿಗಳ ಗಣಿಗಾರಿಕೆಯಿಂದ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕುಸಿದು ರೈತರು ಕೃಷಿಯಿಂದಲೇ ವಿಮುಖರಾಗುವ ಆತಂಕ ಎದುರಾಗಿದೆ.

ರಾತ್ರಿಯಾಗುತ್ತಿದ್ದಂತೆ ಕಾರ್ಖಾನೆಯಿಂದ ಹೊರಬರುವ ಕರಿ ಧೂಳಿನಿಂದಾಗಿ ರಸ್ತೆಗಳೇ ಕಾಣದಂತಾಗಿ ಸರಣಿ ಅಪಘಾತಗಳು ಸಂಭವಿಸುತ್ತಿವೆ. ಈ ವಿಷಕಾರಿ ಗಾಳಿಯಿಂದಾಗಿ ಗ್ರಾಮಸ್ಥರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದ್ದರೆ, ಜಾನುವಾರುಗಳಲ್ಲಿ ಹಾಲಿನ ಇಳುವರಿ ಕುಂಠಿತಗೊಂಡು ರೋಗಬಾಧೆ ಹೆಚ್ಚುತ್ತಿದೆ. ಕುಡಿಯುವ ನೀರು ಮತ್ತು ಆಹಾರ ಕೂಡ ಧೂಳುಮಯವಾಗಿದ್ದು, ಇಡೀ ಗ್ರಾಮವೇ ನರಕಯಾತನೆ ಅನುಭವಿಸುತ್ತಿದೆ. ಹಲವು ವರ್ಷಗಳಿಂದ ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

Tags:

error: Content is protected !!