Bagalkot

ಬಾಗಲಕೋಟೆ: ದೇವರಿಗೆ ನೀರು ತರಲು ಹೋದವ ಕೃಷ್ಣಾರ್ಪಣ; ನದಿಯಲ್ಲಿ ಮುಳುಗಿ ಯುವಕ ಸಾವು

Share

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನಲ್ಲಿ ಸಂಭ್ರಮದ ಜಾತ್ರೆಯ ನಡುವೆ ಈಗ ಸ್ಮಶಾನ ಮೌನ ಆವರಿಸಿದೆ. ದೇವರಿಗೆ ಪವಿತ್ರ ಗಂಗಾ ಪೂಜೆಗಾಗಿ ನೀರು ತರಲು ನದಿಗೆ ಹೋದ ಯುವಕನೊಬ್ಬ ಕಾಲು ಜಾರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ಘಟನೆ ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮದ ಆಂಜನೇಯ ದೇವಸ್ಥಾನದ ಜಾತ್ರೆಯ ಅಂಗವಾಗಿ, ಪವಿತ್ರ ನದಿ ನೀರು ತರಲು ಗ್ರಾಮಸ್ಥರೊಂದಿಗೆ ತೆರಳಿದ್ದ ಮಹಾಂತೇಶ್ ಲೋಕೂರ್ (19) ಎಂಬ ಯುವಕ ಕೃಷ್ಣಾ ನದಿಯ ಹಿನ್ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಬೀಳಗಿ ತಾಲೂಕಿನ ಹಳೆ ಕೊರ್ತಿ ಗ್ರಾಮದ ಬಳಿ ಇರುವ ನದಿಯಲ್ಲಿ ನೀರು ತರಲು ಇಳಿದಾಗ ಕಾಲು ಜಾರಿ ನದಿಯ ಆಳಕ್ಕೆ ಹೋಗಿದ್ದು, ಈ ದುರ್ಘಟನೆ ಸಂಭವಿಸಿದೆ. ಜಾತ್ರೆಯ ಸಂಭ್ರಮದಲ್ಲಿದ್ದ ಕುಟುಂಬ ಮತ್ತು ಗ್ರಾಮಸ್ಥರು ಈ ಅನಿರೀಕ್ಷಿತ ಸಾವಿನಿಂದ ಬೆಚ್ಚಿಬಿದ್ದಿದ್ದಾರೆ.

ನಡೆದ ಕೂಡಲೇ ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಯುವಕನ ಶವವನ್ನು ಹೊರತೆಗೆದಿದ್ದಾರೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಸ್ಥಳದಲ್ಲಿದ್ದವರ ಕರುಳು ಹಿಂಡುವಂತಿತ್ತು. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಬೀಳಗಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಕ್ತಿ ಭಾವದಿಂದ ದೇವರಿಗೆ ನೀರು ತರಲು ಹೋದ ಯುವಕ ಶವವಾಗಿ ಮರಳಿದ್ದು ಗ್ರಾಮಸ್ಥರಲ್ಲಿ ತೀವ್ರ ವಿಷಾದ ಮೂಡಿಸಿದೆ.

Tags:

error: Content is protected !!