ಬಾಗಲಕೋಟೆಯ ನವನಗರದ ರಾಮಪುರ ಪುನರ್ವಸತಿ ಕೇಂದ್ರದಲ್ಲಿ ಕಳೆದ ಹಲವು ದಿನಗಳಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದ ಬಸ್ ನಿಲ್ದಾಣದ ಜಾಗದ ಅತಿಕ್ರಮಣಕ್ಕೆ ಕೊನೆಗೂ ಕಾಲ ಕೂಡಿಬಂದಿದೆ. ನಮ್ಮ ವಾಹಿನಿಯ ನಿರಂತರ ಸುದ್ದಿಯ ಪರಿಣಾಮವಾಗಿ ಅಧಿಕಾರಿಗಳು ಈಗ ಅತಿಕ್ರಮಣ ತೆರವುಗೊಳಿಸಲು ಮುಂದಾಗಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆಯ ನವನಗರ ಬಾಗಲಕೋಟೆಯ ರಾಮಪುರ ಪುನರ್ವಸತಿ ಕೇಂದ್ರದ ಬಸ್ ನಿಲ್ದಾಣಕ್ಕಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಕಟ್ಟಡಗಳನ್ನು ತೆರವುಗೊಳಿಸಲು ಅಧಿಕಾರಿಗಳು ಅಂತಿಮ ಗಡುವು ನೀಡಿದ್ದಾರೆ. ಈ ವಾರದಲ್ಲೇ ಬೃಹತ್ ಕಾರ್ಯಾಚರಣೆ ನಡೆಯಲಿದ್ದು, ಅತಿಕ್ರಮಿತ ಕಟ್ಟಡಗಳಲ್ಲಿರುವ ವಸ್ತುಗಳನ್ನು ತಕ್ಷಣವೇ ಖಾಲಿ ಮಾಡುವಂತೆ ಮಾಲೀಕರಿಗೆ ಖಡಕ್ ಸೂಚನೆ ನೀಡಲಾಗಿದೆ. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಮುಂದಿನ ಅನಾಹುತಗಳಿಗೆ ಅವರೇ ನೇರ ಜವಾಬ್ದಾರರಾಗುತ್ತಾರೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಬಸ್ ನಿಲ್ದಾಣದ ನಿರ್ಮಾಣಕ್ಕಾಗಿ ಈ ಕ್ರಮ ಅನಿವಾರ್ಯವಾಗಿದ್ದು, ನಿರಂತರ ಸುದ್ದಿಯ ಪ್ರಸಾರದ ನಂತರ ಅಧಿಕಾರಿಗಳು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.
