Bagalkot

ಬಾಗಲಕೋಟೆಯಲ್ಲಿ ರಣಬಿಸಿಲಿನ ಅಟ್ಟಹಾಸ: ಕುಕ್ಕಟೋದ್ಯಮಕ್ಕೆ ಭಾರಿ ಹೊಡೆತ, ನೂರಾರು ಕೋಳಿಗಳ ಸಾವು!

Share

ಉತ್ತರ ಕರ್ನಾಟಕದಲ್ಲಿ ಸೂರ್ಯನ ಅಟ್ಟಹಾಸ ಮುಂದುವರಿದಿದೆ. ಬಾಗಲಕೋಟೆಯಲ್ಲಿ ಉಷ್ಣಾಂಶದ ಪ್ರಮಾಣ ದಿನೇ ದಿನೇ ಏರುತ್ತಿದ್ದು, ಬಿಸಿಲಿನ ಝಳಕ್ಕೆ ಮೂಕಪ್ರಾಣಿಗಳು ಬಲಿಯಾಗುತ್ತಿವೆ. ರಣಬಿಸಿಲು ತಾಳಲಾರದೆ ಕೋಳಿ ಮರಿಗಳು ನಿತ್ಯ ಸಾವನ್ನಪ್ಪುತ್ತಿದ್ದು, ಕೋಳಿ ಸಾಕಾಣಿಕೆದಾರರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು, 39 ರಿಂದ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಸಾಮಾನ್ಯವಾಗಿ ಕೋಳಿ ಸಾಕಾಣಿಕೆಗೆ 29 ಡಿಗ್ರಿ ಉಷ್ಣಾಂಶದ ಅಗತ್ಯವಿರುತ್ತದೆ, ಆದರೆ ಈಗಿನ ವಿಪರೀತ ಶಾಖದಿಂದಾಗಿ ಕುಕ್ಕುಟೋದ್ಯಮ ತತ್ತರಿಸುತ್ತಿದೆ. ನಗರದ ಹಮಾಲರ ಕಾಲೋನಿ ಬಳಿಯಿರುವ ನೂರ್ ಜಹಾನ್ ರೊಳ್ಳಿ ಎಂಬುವರಿಗೆ ಸೇರಿದ ಫಾರ್ಮ್‌ನಲ್ಲಿ ಬಿಸಿಲಿನ ಬೇಗೆಗೆ ನೂರಾರು ಕೋಳಿ ಮರಿಗಳು ಬಲಿಯಾಗಿವೆ. ಫಾರ್ಮ್‌ನಲ್ಲಿರುವ 1,700 ಮರಿಗಳ ಪೈಕಿ ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಕೋಳಿಗಳು ಸಾವನ್ನಪ್ಪುತ್ತಿದ್ದು, ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಿಸಿಲಿನಿಂದ ಕೋಳಿಗಳನ್ನು ರಕ್ಷಿಸಲು ಮಾಲೀಕರು ಹರಸಾಹಸ ಪಡುತ್ತಿದ್ದಾರೆ. ಶೆಡ್‌ಗಳ ಮೇಲೆ ನೀರು ಹರಿಸುವುದು, ಒಳಗಡೆ ಸ್ಪ್ರಿಂಕ್ಲರ್ ಮೂಲಕ ನೀರು ಸಿಂಪಡಿಸುವುದು ಮತ್ತು ನಿರಂತರವಾಗಿ ಫ್ಯಾನ್ ಹಾಕಿದರೂ ಬಿಸಿಲಿನ ತಾಪ ನಿಯಂತ್ರಣಕ್ಕೆ ಬರುತ್ತಿಲ್ಲ. ಉಷ್ಣಾಂಶದ ಹೊಡೆತಕ್ಕೆ ಕೋಳಿ ಮರಿಗಳು ಬಾಯ್ತೆರೆದು ಏದುಸಿರು ಬಿಡುತ್ತಾ ಸಾವನ್ನಪ್ಪುತ್ತಿರುವ ದೃಶ್ಯ ಮನಕಲಕುವಂತಿದೆ. ದಿನೇ ದಿನೇ ಹೆಚ್ಚುತ್ತಿರುವ ಸಾವು-ನೋವುಗಳಿಂದ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿರುವ ಸಾಕಾಣಿಕೆದಾರರು, ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ಒಟ್ಟಾರೆಯಾಗಿ, ಮನುಷ್ಯರಷ್ಟೇ ಅಲ್ಲದೆ ಪ್ರಾಣಿ-ಪಕ್ಷಿಗಳಿಗೂ ಈ ಬಾರಿಯ ಬೇಸಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಅನಿವಾರ್ಯವಾಗಿ ಕುಕ್ಕಟೋದ್ಯಮ ನಂಬಿದ ಕುಟುಂಬಗಳು ಈಗ ಆತಂಕದಲ್ಲಿವೆ.

Tags:

error: Content is protected !!