ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದ ಅನುಭವ ಮಂಟಪ ಉತ್ಸವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪ್ರತ್ಯೇಕ ಲಿಂಗಾಯತ ಧರ್ಮದ ಅಗತ್ಯವಿಲ್ಲ ಎಂಬರ್ಥದಲ್ಲಿ ನೀಡಿರುವ ಹೇಳಿಕೆಯನ್ನು ರಾಷ್ಟ್ರೀಯ ಬಸವದಳ ತೀವ್ರವಾಗಿ ಖಂಡಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಲಿಂಗಾಯತ ಅವರು, ವಿಜಯೇಂದ್ರ ಅವರ ಹೇಳಿಕೆಯಲ್ಲಿ ರಾಜಕೀಯ ಹಿತಾಸಕ್ತಿ ಅಡಗಿದೆ ಎಂದು ಆರೋಪಿಸಿದರು. ನಾವೆಲ್ಲರೂ ಒಂದು, ಪ್ರತ್ಯೇಕ ಧರ್ಮದ ಅವಶ್ಯಕತೆಯಿಲ್ಲ. ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ಉದ್ದೇಶದಿಂದ ಪ್ರತ್ಯೇಕ ಧರ್ಮದ ಬೇಡಿಕೆ ಇಡುವ ಅಗತ್ಯವಿಲ್ಲ’ ಎಂಬ ವಿಜಯೇಂದ್ರ ಅವರ ನಿಲುವು ಸರಿಯಲ್ಲ. ವೀರಶೈವ ಮಹಾಸಭಾದ ಅಧ್ಯಕ್ಷ ಈಶ್ವರ ಖಂಡ್ರೆ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಹಿಯೊಂದಿಗೆ ಸ್ವತಂತ್ರ ಧರ್ಮದ ಮಾನ್ಯತೆ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದನ್ನು ಮರೆಯಬಾರದು ಎಂದರು. ಲಿಂಗಾಯತ ಸಮುದಾಯ ದಲ್ಲಿಯೂ ಸಾಕಷ್ಟು ಬಡವರಿದ್ದು, ಅವರ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳು ಸುಧಾರಿಸಬೇಕಿದೆ. ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆ ಪಾವತಿಸುವ ಸಮುದಾಯದ ಜನರು ತಮ್ಮ ಹಕ್ಕು ಮತ್ತು ಸೌಲಭ್ಯಗಳನ್ನು ಕೇಳುವುದು ತಪ್ಪೇ ಎಂದು ಪ್ರಶ್ನಿಸಿದರು. ವಿಜಯೇಂದ್ರ ಅವರ ಹೇಳಿಕೆ ಅಪ್ರಬುದ್ಧತೆಯಿಂದ ಕೂಡಿದ್ದು, ಕೂಡಲೇ ಅದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಲಿಂಗಾಯತ ಸಮಾಜ ಇಂದು ಜಾಗೃತಗೊಂಡಿದ್ದು, ಯಾರದ್ದೋ ಗುಲಾಮಗಿರಿಯಲ್ಲಿ ಬದುಕಲು ಸಿದ್ಧವಿಲ್ಲ. ಬಸವ ಧರ್ಮದ ಅಡಿಯಲ್ಲಿ ಸುಮಾರು 3,500 ಮಠಗಳಿದ್ದು, ರಾಷ್ಟ್ರಧರ್ಮದ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ರಾಷ್ಟ್ರಗಳ ನಡುವೆ ದ್ವೇಷವನ್ನು ನಿವಾರಿಸಿ ಪ್ರೀತಿ, ವಿಶ್ವಾಸ ಮತ್ತು ಮಾನವೀಯತೆಯನ್ನು ಸಾರುವ ಶಕ್ತಿ ಬಸವ ಧರ್ಮಕ್ಕಿದೆ. ಅಪ್ಪ ಬಸವಣ್ಣನವರು ಸ್ವತಂತ್ರ ಧರ್ಮದ ಹರಿಕಾರರಾಗಿದ್ದು, ಅವರ ಅನುಯಾಯಿಗಳಾದ ವಿಜಯೇಂದ್ರ ಮತ್ತು ಈಶ್ವರ ಖಂಡ್ರೆ ಅವರು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ದೊರಕಿಸಲು ಶ್ರಮಿಸಬೇಕು ಎಂದರು. ಕಾಯಕವೇ ಕೈಲಾಸ ಎಂಬ ತತ್ವವನ್ನು ಸಾರಿದ ಲಿಂಗಾಯತ ಧರ್ಮದ ಸ್ವತಂತ್ರ ಅಸ್ತಿತ್ವಕ್ಕಾಗಿ ಹಿಂದಿನಿಂದಲೂ ಹೋರಾಟ ನಡೆಯುತ್ತಿದ್ದು, ಮುಂದೆಯೂ ಹೋರಾಟ ಮುಂದುವರಿಯಲಿದೆ. ವಚನ ಸಾಹಿತ್ಯವನ್ನು ಅಧ್ಯಯನ ಮಾಡಿದವರಿಗೆ ಮಾತ್ರ ಲಿಂಗಾಯತ ಧರ್ಮದ ನಿಜವಾದ ಆಶಯ ಅರ್ಥವಾಗುತ್ತದೆ. ಆದ್ದರಿಂದ ರಾಜಕಾರಣಿಗಳು ವಚನ ಸಾಹಿತ್ಯವನ್ನು ಅಧ್ಯಯನ ಮಾಡಿ ಸತ್ಯಾಂಶಗಳನ್ನು ಅರಿತು ಮಾತನಾಡಬೇಕು ಎಂದು ಹೇಳಿದರು. ಕೋರಣಹಳ್ಳಿ ವೀರಣ್ಣ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಅಧಿಕೃತ ಮಾನ್ಯತೆ ದೊರೆಯಬೇಕು ಎಂಬ ಬೇಡಿಕೆ ಪೂಜ್ಯ ಮಾತೆ ಮಹಾದೇವಿಯವರ ಕಾಲದಿಂದಲೂ ಕೇಳಿಬರುತ್ತಿದೆ. 12ನೇ ಶತಮಾನದಲ್ಲಿಯೇ ಬಸವಣ್ಣನವರು ಸ್ವತಂತ್ರ ಧರ್ಮದ ಪರಿಕಲ್ಪನೆಯನ್ನು ನೀಡಿದ್ದು, ಅದಕ್ಕೆ ಸಾಂವಿಧಾನಿಕ ಮಾನ್ಯತೆ ದೊರೆತು ಸಮುದಾಯಕ್ಕೆ ಸೌಲಭ್ಯಗಳು ಸಿಗಬೇಕಿದೆ ಎಂದರು. ಭಾರತದ ನಾಗರಿಕರೂ ಅಲ್ಲದ ಲೇಖಕ ರವಿ ಹಂಜ್ ಅವರಂತಹವರು ಬಸವಣ್ಣನವರು ಹಾಗೂ ಲಿಂಗಾಯತ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಲಿಂಗಾಯತ ಧರ್ಮದ ಗೌರವವನ್ನು ಕುಗ್ಗಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು. ಬಸವಣ್ಣನವರು ಎಲ್ಲರಿಗೂ ಸಮಾನತೆ ಸಾರಿದವರು. ಕೈಯಲ್ಲಿ ಇಷ್ಟಲಿಂಗ ನೀಡಿ, ಯಾವುದೇ ಬೇಧಭಾವವಿಲ್ಲದೆ ಎಲ್ಲರನ್ನೂ ಒಳಗೊಳ್ಳುವ ಧರ್ಮವನ್ನು ರೂಪಿಸಿದವರು. ಹೀಗಾಗಿ ರಾಜಕೀಯ ನಾಯಕರು ಬಸವಣ್ಣನವರು ಮತ್ತು ಲಿಂಗಾಯತ ಧರ್ಮದ ಕುರಿತು ಸರಿಯಾದ ತಿಳಿವಳಿಕೆ ಪಡೆದು ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಹೇಳಿದರು. ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ಬಸವರಾಜ ಕೊಂಡಗೂಳಿ ಮಾತನಾಡಿ, ಬಸವಕಲ್ಯಾಣದಲ್ಲಿ ನಡೆದ ಘಟನೆ ಆಕಸ್ಮಿಕವಲ್ಲ, ಸಂಪೂರ್ಣ ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿದರು. ಜಾತಿವಾದಿಗಳು ಮತ್ತು ಧರ್ಮವಿರೋಧಿಗಳು ವಿಜಯೇಂದ್ರ ಅವರಂತಹ ನಾಯಕರಿಂದ ಇಂತಹ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ವಿಶ್ವನಾಯಕರಾಗಿರುವ ಬಸವಣ್ಣನವರ ಪ್ರಭಾವವನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಕೇಂದ್ರ ಸರ್ಕಾರದಲ್ಲಿ ಬಾಕಿ ಇರುವ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಕುರಿತ ಪ್ರಸ್ತಾವನೆಯನ್ನು ಚುರುಕುಗೊಳಿಸಿ, ಮಾನ್ಯತೆ ದೊರಕಿಸಿಕೊಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ಲಿಂಗಾಯತ ಧರ್ಮ ಮಹಾಸಭಾದ ಅಧ್ಯಕ್ಷ ಕಿರಣ ಬೆಲ್ಲದ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿಯೇ ಸ್ವತಂತ್ರ ಧರ್ಮವನ್ನು ಸ್ಥಾಪಿಸಿದ್ದಾರೆ. ಈಗ ಅಗತ್ಯವಿರುವುದು ಆ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ದೊರಕಿಸುವುದಾಗಿದೆ. ಇದರಿಂದ ಸಮುದಾಯದ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಶೈಕ್ಷಣಿಕ, ಸಾಮಾಜಿಕ ಮತ್ತು ಇತರ ಸೌಲಭ್ಯಗಳು ದೊರೆಯಲಿವೆ ಎಂದರು. 1920ರಿಂದಲೂ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಟ ನಡೆಯುತ್ತಿದೆ. ಮಾತೆ ಮಹಾದೇವಿ, ಲಿಂಗಾನಂದ ಸ್ವಾಮೀಜಿ ಸೇರಿದಂತೆ ರಾಜ್ಯದ ಅನೇಕ ಮಠಗಳು ಹಾಗೂ ಬಸವಪರ ಸಂಘಟನೆಗಳು ಈ ಹೋರಾಟದಲ್ಲಿ ತೊಡಗಿವೆ. ಲಿಂಗಾಯತ ಸಮಾಜದ ಧ್ವನಿಗೆ ಸ್ಪಂದಿಸಿ ವಿಜಯೇಂದ್ರ ಅವರು ಧರ್ಮದ ಮಾನ್ಯತೆಗಾಗಿ ಶ್ರಮಿಸಬೇಕು ಎಂದು ಒತ್ತಾಯಿಸಿದರು. ಡಾ. ಜೆ.ಎಸ್. ಪಾಟೀಲ ಮಾತನಾಡಿ, ಲಿಂಗಾಯತ ಧಾರ್ಮಿಕ ಸಭೆಗೆ ಆಗಮಿಸಿದ್ದ ವಿಜಯೇಂದ್ರ ಅವರು ಹಿಂದೂ ಧಾರ್ಮಿಕ ವಿಚಾರಗಳ ಕುರಿತು ಮಾತನಾಡುವ ಅವಶ್ಯಕತೆ ಇರಲಿಲ್ಲ. ಲಿಂಗಾಯತ ಸಮುದಾಯದ ಬೆಂಬಲದಿಂದಲೇ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದರು. ಈ ಹಿಂದೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದ ವೀರಶೈವ ಮಹಾಸಭಾದವರು ಈಗ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ಆರ್ಎಸ್ಎಸ್, ಬಿಜೆಪಿ ಹಾಗೂ ಕಾಂಗ್ರೆಸ್ನಲ್ಲಿರುವ ಲಿಂಗಾಯತ ವಿರೋಧಿ ನಿಲುವು ಹೊಂದಿರುವವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು. ಒಟ್ಟಾರೆ, ಬಸವಕಲ್ಯಾಣ ಅನುಭವ ಮಂಟಪ ಉತ್ಸವದಲ್ಲಿ ವಿಜಯೇಂದ್ರ ನೀಡಿದ ಹೇಳಿಕೆ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಯ ವಿಚಾರವಾಗಿ ಮತ್ತೊಮ್ಮೆ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ಕಾರಣವಾಗಿದ್ದು, ರಾಷ್ಟ್ರೀಯ ಬಸವದಳದ ಮುಖಂಡರು ಹೇಳಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
