Vijaypura

ಮುಳವಾಡ ಏತ ನೀರಾವರಿ ಉಪ ಕಾಲುವೆ ಕಾಮಗಾರಿಯಲ್ಲಿ ಕಳಪೆ ಆರೋಪ: ಟಕ್ಕಳಕಿ ಕೆಬಿಜೆಎನ್‌ಎಲ್ ಕಚೇರಿ ಎದುರು ಜಾಂಭವ ಯುವ ಸೇನೆ ಧರಣಿ

Share

ವಿಜಯಪುರ ಜಿಲ್ಲೆಯ ಮುಳವಾಡ ಏತ ನೀರಾವರಿ ಯೋಜನೆಯ ಹಂತ-3ರ ಅಡಿಯಲ್ಲಿ ನಿರ್ಮಿಸಲಾಗಿರುವ ಉಪ ಕಾಲುವೆಗಳ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಕಾಮಗಾರಿ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಜಾಂಭವ ಯುವ ಸೇನೆ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಟಕ್ಕಳಕಿಯ ಕೆಬಿಜೆಎನ್‌ಎಲ್ ಎಂಎಲ್‌ಐ ವೃತ್ತ ಕಚೇರಿ ಎದುರು ಧರಣಿ ಸತ್ಯಾಗ್ರಹ ಆರಂಭಿಸಿದರು. ಈ ಸಂದರ್ಭದಲ್ಲಿ ಜಾಂಭವ ಯುವ ಸೇನೆಯ ವಿಜಯಪುರ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ನಂದಿ ಮಾತನಾಡಿ, ಉಪ ಕಾಲುವೆಗಳ ನಿರ್ಮಾಣ ಕಾಮಗಾರಿಯಲ್ಲಿ ನಿಗದಿತ ಪ್ರಮಾಣದ ಸಾಮಗ್ರಿಗಳನ್ನು ಬಳಸದೆ ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ಆರೋಪಿಸಿದರು. ಇನ್ನು ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಬೇಕಾದ ಸಂಬಂಧಪಟ್ಟ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಿದ ಅವರು, ಕಳಪೆ ಕಾಮಗಾರಿಯನ್ನು ತೆರವುಗೊಳಿಸಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ತಪ್ಪಿತಸ್ಥ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದರ ಜೊತೆಗೆ ಅವರನ್ನು ಅಮಾನತು ಗೊಳಿಸಬೇಕು ಎಂದು ಆಗ್ರಹಿಸಿದರು. ತಮ್ಮ ಬೇಡಿಕೆಗಳು ಈಡೇರುವವರೆಗೆ ಟಕ್ಕಳಕಿ ಕೆಬಿಜೆಎನ್‌ಎಲ್ ಕಚೇರಿ ಎದುರು ನಿರಂತರ ಧರಣಿ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಧರಣಿಯಲ್ಲಿ ಜಾಂಭವ ಯುವ ಸೇನೆಯ ಜಿಲ್ಲಾ ಉಪಾಧ್ಯಕ್ಷ ಕಾಲಪ್ಪ ಮಾದರ, ತಾಲೂಕು ಅಧ್ಯಕ್ಷ ಬಸವರಾಜ ಅಂಬೇಡ್ಕರ್, ಬಸವರಾಜ ಭಜಂತ್ರಿ, ಡಿಎಸ್‌ಎಸ್ ತಾಲೂಕು ಅಧ್ಯಕ್ಷ ಯಮನಪ್ಪ ಮ್ಯಾಗೇರಿ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಲಾಲುಸಾಬ ಕೊರಬು ಸೇರಿದಂತೆ ಹಣಮಂತ ಮ್ಯಾಗೇರಿ, ತಾಯಪ್ಪ ಮ್ಯಾಗೇರಿ, ಮಹೇಶ ಹೆಬ್ಬಾಳ, ರಾಹುಲ ಹೆಬ್ಬಾಳ, ಅಶೋಕ ನಡುವಿನಮನಿ, ಅಲಾಭಕ್ಷ ಹುಬ್ಬಳ್ಳಿ, ಅಬ್ದುಲರಜಾಕ ಬಾಗವಾನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:

error: Content is protected !!