Belagavi

ಬೆಳಗಾವಿ ಅಧಿವೇಶನಕ್ಕೆ 7,000 ಪೊಲೀಸರ ಸರ್ಪಗಾವಲು; ಖಾಕಿ ಪಡೆಗೆ ವಸತಿ ಟೌನ್‌ಶಿಪ್ ಸಜ್ಜು

Share

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಪೊಲೀಸ್ ಇಲಾಖೆ ಭರ್ಜರಿ ಸಿದ್ಧತೆ ನಡೆಸಿದೆ. ಭದ್ರತೆಗೆ ಆಗಮಿಸುವ 7,000 ಪೊಲೀಸ್ ಸಿಬ್ಬಂದಿಗೆ ವಸತಿ, ಭೋಜನದ ಜೊತೆಗೆ ಮನರಂಜನೆಗಾಗಿ ಬೃಹತ್ ಟೌನ್‌ಶಿಪ್ ನಿರ್ಮಿಸಲಾಗಿದ್ದು, ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ಇಂದು ಪರಿಶೀಲನೆ ನಡೆಸಿದರು.

ಬೆಳಗಾವಿ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಬಂದೋಬಸ್ತ್‌ಗಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಸುಮಾರು 7,000 ಮಂದಿಯನ್ನು ನಿಯೋಜಿಸಲಾಗುತ್ತಿದೆ. ಹೊರಗಿನಿಂದ ಆಗಮಿಸುವ ಪೊಲೀಸರಿಗೆ ತೊಂದರೆಯಾಗದಂತೆ ನಗರದ 11 ಕಡೆಗಳಲ್ಲಿ ಬೃಹತ್ ಟೌನ್‌ಶಿಪ್ ಮಾದರಿಯ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದು ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ಮತ್ತು ಡಿಸಿಪಿ ಎನ್.ವಿ. ಬರಮನಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಬ್ಬಂದಿಗೆ ಉತ್ತಮ ಊಟ, ಬಿಸಿ ನೀರು, ಕಾಟ್ ಮತ್ತು ಬೆಡ್ ವ್ಯವಸ್ಥೆಯ ಜೊತೆಗೆ ಸಂಜೆ ಕರ್ತವ್ಯ ಮುಗಿದ ಬಳಿಕ ಒತ್ತಡ ನಿವಾರಣೆಗಾಗಿ ಟಿವಿ ಹಾಗೂ ಹಾಡುವ ಆಸಕ್ತರಿಗಾಗಿ ವಿಶೇಷ ಕ್ಯಾರೋಕೆ (Karaoke) ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

ಅಧಿವೇಶನದ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ ಮತ್ತು ಮನವಿ ಸಲ್ಲಿಕೆಗೆ ಸಂಬಂಧಿಸಿದಂತೆ ಈಗಾಗಲೇ ಸುಮಾರು 60 ಅರ್ಜಿಗಳು ಪೊಲೀಸ್ ಇಲಾಖೆಗೆ ಬಂದಿವೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪ್ರತಿಭಟನೆಗೆ ಎರಡು ಪ್ರತ್ಯೇಕ ಸ್ಥಳಗಳನ್ನು ನಿಗದಿಪಡಿಸಲಾಗಿದ್ದು, 500ಕ್ಕಿಂತ ಕಡಿಮೆ ಜನರಿರುವ ಪ್ರತಿಭಟನೆಗೆ ಹಲಗಾ-ಮಚ್ಚೆ ಬೈಪಾಸ್ ಹಾಗೂ 500ಕ್ಕಿಂತ ಹೆಚ್ಚು ಜನರಿರುವ ಪ್ರತಿಭಟನೆಗೆ ಧಾರವಾಡ ನಾಕಾದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಾಶ್ ನಿಕ್ಕಂ ತಿಳಿಸಿದ್ದಾರೆ.

ಇದೇ ವೇಳೆ ಪ್ರತಿಭಟನಾಕಾರರಿಗೆ ಖಡಕ್ ಎಚ್ಚರಿಕೆ ನೀಡಿರುವ ಆಯುಕ್ತರು, ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಯಾವುದೇ ಕಾರಣಕ್ಕೂ ರಸ್ತೆ ತಡೆ ಅಥವಾ ಸೌಧಕ್ಕೆ ಮುತ್ತಿಗೆ ಹಾಕಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಲು ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ. ಆದರೆ, ಯಾರಾದರೂ ಕಾನೂನು ಕೈಗೆತ್ತಿಕೊಳ್ಳಲು ಪ್ರಯತ್ನಿಸಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

Tags:

error: Content is protected !!