ಸ್ಟಿಂಗ್ ವಿಚಾರ ನನಗೆ ಗೊತ್ತಿಲ್ಲ, ನಾನು ಟಿವಿ ನೋಡಲ್ಲ, ಮೊಬೈಲ್ ಕೂಡ ನೋಡಲ್ಲ. ಬರುವ ಫೋನ್ ಕಾಲ್ಗಳನ್ನು ಮಾತ್ರ ರಿಸೀವ್ ಮಾಡುತ್ತೇನೆ ಎಂದು ಶಾಸಕ ವಿನಯ್ ಕುಲಕರ್ಣಿ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಸ್ಟಿಂಗ್ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಅದರ ಬಗ್ಗೆ ನನಗೆ ಗೊತ್ತೂ ಇಲ್ಲ. ಕಬ್ಬು ಬೆಳೆಗಾರರ ಸಭೆಯ ವಿಚಾರವಾಗಿ ಮಾತನಾಡಿದ ಅವರು, ರೈತ ನಮ್ಮ ದೇಶದ ಬೆನ್ನೆಲುಬು ಎಂದು ಕೇವಲ ಮಾತನಾಡುವುದಷ್ಟೇ ಅಲ್ಲ. ನಾನು ಕೂಡ ಪದವಿ ಮುಗಿಸಿದ ಬಳಿಕ ರೈತನಾಗಿ ಕೆಲಸ ಮಾಡುತ್ತ ಬಂದಿದ್ದೇನೆ. ಈಗ ಡೀಸೆಲ್ ದರ, ರಸಗೊಬ್ಬರ ಮತ್ತು ಕಾರ್ಮಿಕರ ಕೂಲಿ ಹೆಚ್ಚಾಗಿದೆ. ರೈತರ ಕುಟುಂಬ ನಿರ್ವಹಿಸುವುದು ಕಷ್ಟವಾಗಿದೆ. ಸದ್ಯ ಸಿಎಂ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕಿತ್ತೂರಿನಲ್ಲಿ ಅಷ್ಟು ರೈತರನ್ನು ನೋಡಿ ಭಯ ಬೀಳಬೇಕು. ಆದರೂ ಸಿಎಂ ಧೈರ್ಯದಿಂದ ಬಂದು ಆಶ್ವಾಸನೆ ನೀಡಿದರು.
ಅ. 26ರಂದು ರೈತರ ಬೇಡಿಕೆಗಳೇನು ಎಂಬುದನ್ನು ಪರಿಶೀಲಿಸಲು ಸಭೆ ಇದೆ. ರೈತರು ಮತ್ತು ಸರ್ಕಾರದ ನಡುವೆ ಮಾತುಕತೆ ನಡೆದು ಸಮಸ್ಯೆ ಬಗೆಹರಿಸುವ ಕೆಲಸ ಆಗಬೇಕು. ಕಬ್ಬಿನ ಕಾರ್ಖಾನೆಗಳೂ ಉಳಿಯಬೇಕು. ಎಂಎಸ್ಪಿ ಹೆಚ್ಚಾಗದಿದ್ದರೆ ಕಾರ್ಖಾನೆಗಳೂ ಉಳಿಯುವುದಿಲ್ಲ. ಎಥೆನಾಲ್ ಹಾಕಿ ಎಂದು ಕೇಂದ್ರ ಸರ್ಕಾರ ಮೊದಲು ಹೇಳಿತ್ತು. ಒಂದೊಂದು ಕಾರ್ಖಾನೆಯಲ್ಲಿ ಏಳು ಲಕ್ಷ ಲೀಟರ್ ಎಥೆನಾಲ್ ಉಳಿದಿದೆ. ಸಂಗ್ರಹಿಸಲು ಅವರ ಬಳಿ ಟ್ಯಾಂಕ್ ಇಲ್ಲ. ಉತ್ತರ ಪ್ರದೇಶ ಮತ್ತು ಗುಜರಾತ್ನಲ್ಲಿ ಶೇ. 100ರಷ್ಟು ಎಥೆನಾಲ್ ಖರೀದಿ ಮಾಡುತ್ತಾರೆ. ನಮ್ಮಲ್ಲಿ ಯಾಕೆ ಖರೀದಿ ಮಾಡುವುದಿಲ್ಲ? ದೇಶಕ್ಕೆ ಒಂದೇ ಕಾಯ್ದೆ, ಕಾನೂನು ಇರಬೇಕು. ಒಂದು ರಾಜ್ಯಕ್ಕೆ ಒಂದು, ಮತ್ತೊಂದು ರಾಜ್ಯಕ್ಕೆ ಮತ್ತೊಂದು ಎಂದರೆ ಇದು ಯಾವ ನ್ಯಾಯ? ಈ ಕಾರಣಕ್ಕಾಗಿ ಸಿಎಂ ಕಾರ್ಖಾನೆ ಮಾಲೀಕರನ್ನೂ ಸಭೆಗೆ ಕರೆದಿದ್ದಾರೆ.
ಕೇವಲ ರೈತರ ಸಮಸ್ಯೆ ಕೇಳಿದರೆ ನಡೆಯುವುದಿಲ್ಲ. ಕಾರ್ಖಾನೆಗಳು ಬಂದ್ ಆದರೆ ಕಬ್ಬು ಬೆಳೆಯುವ ರೈತರು ಎಲ್ಲಿಗೆ ಹೋಗಬೇಕು? ರೈತರು ಮತ್ತು ಕಬ್ಬು ಬೆಳೆಗಾರರು ಉಳಿಯಬೇಕು. ಅದಕ್ಕಾಗಿ ಸಿಎಂ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
