ಖಾನಾಪುರ ತಾಲೂಕಿನ ಬೀಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸತತ ಮೂರು ದಿನಗಳಿಂದ ಹಗಲು-ರಾತ್ರಿ ಎನ್ನದೆ ಬೀದಿ ದೀಪಗಳು ಉರಿಯುತ್ತಿದ್ದರೂ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ‘ಇನ್ ನ್ಯೂಸ್’ ಈ ಬಗ್ಗೆ ಸವಿಸ್ತಾರ ವರದಿ ಪ್ರಸಾರ ಮಾಡಿದ ಬಳಿಕ ಎಚ್ಚೆತ್ತ ಹೆಸ್ಕಾಂ ಸಿಬ್ಬಂದಿ ಲೈನ್ ಫಾಲ್ಟ್ ದುರಸ್ತಿಗೊಳಿಸಿದ್ದಾರೆ.
ಬೀಡಿ ಗ್ರಾಮದ ಸಂಗೊಳ್ಳಿ ರಾಯಣ್ಣ ಸರ್ಕಲ್ನಿಂದ ದರ್ಗಾದವರೆಗಿನ ಬೀದಿ ದೀಪಗಳು ಮಟಮಟ ಮಧ್ಯಾಹ್ನವೂ ಉರಿಯುತ್ತಿರುವ ದೃಶ್ಯ ಕಂಡುಬಂದಿದ್ದು, ಹೆಸ್ಕಾಂ ಇಲಾಖೆಗೆ ಮಾಹಿತಿ ನೀಡಿ ಲೈನ್ ಫಾಲ್ಟ್ ದುರಸ್ತಿ ಮಾಡಿಸಬೇಕಿದ್ದ ಪಿಡಿಒ ಅವರ ಭಾರಿ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತಿದೆ. ಸಾರ್ವಜನಿಕರ ಸಾಲ-ಸೋಲದ ತೆರಿಗೆ ಹಣದಿಂದ ಪಂಚಾಯಿತಿಯು ಹೆಸ್ಕಾಂಗೆ ವಿದ್ಯುತ್ ಬಿಲ್ ಪಾವತಿಸಬೇಕಿದ್ದು, ಅಧಿಕಾರಿಗಳ ಈ ಬೇಜವಾಬ್ದಾರಿಯಿಂದ ವ್ಯರ್ಥವಾಗಿರುವ ಮೂರು ದಿನಗಳ ಹೆಚ್ಚುವರಿ ಬಿಲ್ ಹೊರೆಯನ್ನು ಯಾರು ಹೊರಬೇಕು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕಾಡುತ್ತಿದೆ. ಹೆಸ್ಕಾಂ ಇಲಾಖೆ ಬಿಲ್ ಮನ್ನಾ ಮಾಡದಿರುವಾಗ, ಈ ಅನಗತ್ಯ ವೆಚ್ಚವನ್ನು ಪಿಡಿಒ ಅವರ ಸಂಬಳದಿಂದಲೇ ಭರಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ತೆರಿಗೆ ಹಣಕ್ಕೆ ಬೆಲೆ ನೀಡದ ಇಂತಹ ಕರ್ತವ್ಯ ಲೋಪದ ವಿರುದ್ಧ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (EO) ರಮೇಶ್ ಮೇತ್ರಿ ಅವರು ಯಾವ ರೀತಿಯ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಅಲ್ತಾಫ್ ಎಂ ಬಸರೀಕಟ್ಟಿ, ಇನ್ ನ್ಯೂಸ್ ಖಾನಾಪುರ
