Khanapur

ಖಾನಾಪುರ: ಗಾಯರಾಣ ಜಮೀನು ರಕ್ಷಣೆಗೆ ಆಗ್ರಹಿಸಿ ಕೊಡಚವಾಡ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ!

Share

ಖಾನಾಪುರ ತಾಲೂಕಿನ ಕೊಡಚವಾಡ ಗ್ರಾಮದ 5 ಎಕರೆ ಸರ್ಕಾರಿ ಗಾಯರಾಣ ಜಮೀನನ್ನು ಇತರ ಉದ್ದೇಶಗಳಿಗೆ ಬಳಸಿಕೊಳ್ಳಲು ಸರ್ಕಾರಕ್ಕೆ ವರದಿ ಸಲ್ಲಿಸುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ಇಂದು ತಹಸೀಲ್ದಾರ್ ಕಚೇರಿ ಮುಂದೆ ಭಾರಿ ಪ್ರತಿಭಟನೆ ನಡೆಸಿದರು. ಹೈನುಗಾರಿಕೆ ಮತ್ತು ಜಾನುವಾರುಗಳ ಮೇವಿಗೆ ಏಕೈಕ ಆಸರೆಯಾಗಿರುವ ಈ ಜಮೀನನ್ನು ಉಳಿಸಿಕೊಡುವಂತೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

ಕೊಡಚವಾಡ ಗ್ರಾಮದಲ್ಲಿ ರೈತಾಪಿ ಮತ್ತು ಹೈನುಗಾರಿಕೆಯೇ ಬಹುತೇಕ ಜನರ ಪ್ರಮುಖ ಜೀವನೋಪಾಯವಾಗಿದ್ದು, ಇಡೀ ಗ್ರಾಮದ ದನ-ಕರುಗಳ ಮೇಯಿಸುವಿಕೆಗೆ ಕೇವಲ 5 ಎಕರೆ ಸರ್ಕಾರಿ ಗಾಯರಾಣ ಜಮೀನು ಮಾತ್ರ ಲಭ್ಯವಿದೆ. ಹೀಗಿರುವಾಗ, ಈ ಜಾಗವನ್ನು ಬೇರೆ ಸರ್ಕಾರಿ ಯೋಜನೆಗಳಿಗೆ ವಹಿಸಿಕೊಡಲು ಅಧಿಕಾರಿಗಳು ವರದಿ ನೀಡುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಿರ್ಧಾರದಿಂದ ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗಿ ರೈತರಿಗೆ ತೀವ್ರ ಅನ್ಯಾಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಯಾವುದೇ ಕಾರಣಕ್ಕೂ ಗಾಯರಾಣ ಜಮೀನನ್ನು ಅನ್ಯ ಉದ್ದೇಶಗಳಿಗೆ ಬಳಸಬಾರದೆಂದು ತಹಶೀಲ್ದಾರರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಪ್ರಮೋದ್ ಕೋಛೇರಿ, ರಾಜಶೇಖರ ಹಿಂಡಲಗಿ, ರೈತ ಮುಖಂಡ ರುದ್ರಗೌಡ ಪಾಟೀಲ್, ಕಲ್ಲಪ್ಪ ಯೇಮೋಜಿ, ನಂದಕುಮಾರ್ ಬಾಳೆಕುಂದರಿ, ವಿಠ್ಠಲ ರಾಮಾಜಿ, ಜಿನ್ನಪ್ಪ ಹಟ್ಟಿಹೊಳಿ, ರೋಹನ್ ಕೊಳಕಾರ, ಪರಶುರಾಮ ರಾಮಾಜಿ, ಯಲ್ಲಪ್ಪ ಹಿಂಡಲಗಿ, ಫಕ್ಕೀರ ಹೊನಗೇಕರ, ತುಕಾರಾಮ ಭಾತಕಾಂಡೆ ಯಲ್ಲಪ್ಪ ಬಾಬಾಜಿ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

Tags:

error: Content is protected !!