ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನೀಡಿದ ಹಲವು ಭರವಸೆಗಳನ್ನು ಮನಗಂಡು ಅವರಿಗೆ ನ.26 ರವರೆಗೆ ಗಡುವು ನೀಡಿ ತಾತ್ಕಾಲಿಕವಾಗಿ ಈ ಹೋರಾಟವನ್ನು ಸ್ಥಗಿತಗೊಳಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ಹೇಳಿದರು.
ಧಾರವಾಡದ ಯರಿಕೊಪ್ಪ ಬಳಿ ಹೋರಾಟವನ್ನು ಅಂತ್ಯಗೊಳಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನ.26ರ ಒಳಗಾಗಿ ಕಬ್ಬು ಬೆಳೆಗಾರರ ಬೇಡಿಕೆ ಈಡೇರದೇ ಇದ್ದಲ್ಲಿ 1 ಕೋಟಿ ಜನ ಮತ್ತೆ ಹುಬ್ಬಳ್ಳಿಗೆ ಬರುತ್ತೇವೆ. ಅಷ್ಟರೊಳಗೆ ನಮ್ಮ ಬೇಡಿಕೆಗಳು ಈಡೇರಬೇಕು. ಇನ್ನು ಮುಖ್ಯಮಂತ್ರಿಗಳು ಎಲ್ಲ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಎರಡೂರು ದಿನದಲ್ಲಿ ಸಭೆ ನಡೆಸಿ ಪ್ರತಿ ಟನ್ ಕಬ್ಬಿಗೆ 500 ರೂಪಾಯಿ ಹೆಚ್ಚುವರಿ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಚೂನಪ್ಪ ತಿಳಿಸಿದರು.
ರಾಜ್ಯದ 31 ಜಿಲ್ಲೆಗಳ ರೈತರಿಗೆ ಒಂದೇ ರೀತಿಯ ಕಬ್ಬಿನ ದರ ಸಿಗಬೇಕು ಹಾಗೂ ಗುರ್ಲಾಪುರದಲ್ಲಿ ನಿರ್ಧಾರವಾದ ದರವನ್ನೇ ಎಲ್ಲ ಕಾರ್ಖಾನೆಗಳು ನೀಡಬೇಕು ಎಂದು ಆಗ್ರಹಿಸಿರುವ ಶಶಿಕಾಂತ್ ಗುರೂಜಿ, ಪ್ರತಿ ಟನ್ಗೆ 1000 ರೂ. ಬೆಂಬಲ ಬೆಲೆ ಘೋಷಿಸಬೇಕು ಮತ್ತು ಕಾರ್ಖಾನೆಗಳು 500 ರೂ. ಕಡ್ಡಾಯವಾಗಿ ಕೊಡಲೇಬೇಕೆಂದು ಎಚ್ಚರಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ನಾಲ್ಕು ಶಾಸಕರ ನೇತೃತ್ವದಲ್ಲಿ ಎಂಎಸ್ಪಿ ದರ ನಿಗದಿ ಕುರಿತು ರಾತ್ರಿಯಿಡೀ ಸಭೆ ನಡೆದಿದ್ದು, ಇದರ ನಿರ್ಧಾರವನ್ನು ಚೂನಪ್ಪ ಪೂಜಾರಿ ತಿಳಿಸಲಿದ್ದಾರೆ ಎಂದ ಅವರು, ಎಂಎಸ್ಪಿ ಬೆಂಬಲ ಬೆಲೆ ಘೋಷಣೆಯಾಗದಿದ್ದರೆ ರಾಜಕಾರಣಿಗಳ ಭವಿಷ್ಯ ಅಂತ್ಯಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
