ಮಾಂಜಾ ದಾರ ಕೊರಳಿಗೆ ಉರುಳಾಗಿ ಪರಿಣಮಿಸಿ ಮಹಿಳೆಯೊಬ್ಬರು ಹುಬ್ಬಳ್ಳಿಯಲ್ಲಿ ದಾರುಣವಾಗಿ ಸಾವನ್ನಪ್ಪಿದ ಬೆನ್ನಲ್ಲೇ ಧಾರವಾಡ ಪೊಲೀಸರು ಎಚ್ಚೆತ್ತುಕೊಂಡು, ಗಾಳಿ ಪಟ ದಾರ ಮಾರಾಟ ಮಾಡುವ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಗಾಳಿಪಟ ಹಾರಿಸುವುದಕ್ಕೋಸ್ಕರ ಮಾಂಜಾ ದಾರ ಬಳಕೆ ಮಾಡಲಾಗಿತ್ತು. ಈ ದಾರ ಸ್ಕೂಟಿಯಲ್ಲಿ ಬರುತ್ತಿದ್ದ ವಿದ್ಯಾ ಎಂಬ ಮಹಿಳೆಗೆ ಉರುಳಾಗಿ ಪರಿಣಮಿಸಿ ಕತ್ತು ಸೀಳಿ ಆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಈ ಘಟನೆ ನಡೆದ ಬೆನ್ನಲ್ಲೇ ಧಾರವಾಡದ ಅನೇಕ ಕಡೆಗಳಲ್ಲಿ ಮಾರಾಟ ಮಾಡಲಾಗುತ್ತಿದ್ದ ಮಾಂಜಾ ದಾರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಧಾರವಾಡದ ಭೂಸಪ್ಪ ಚೌಕ್ ಬಳಿಯ ಅಂಗಡಿಯೊಂದರಲ್ಲಿ ಈ ಮಾಂಜಾ ದಾರ ಮಾರಾಟ ಮಾಡುತ್ತಿದುದನ್ನು ಕಂಡ ಪೊಲೀಸರು ಅದನ್ನು ವಶಪಡಿಸಿಕೊಂಡು ಇದೀಗ ಆ ಅಂಗಡಿ ಮಾಲೀಕನ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ.
