Dharwad

ಧಾರವಾಡ SDA ನೌಕರನ ಆತ್ಮಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್: ಉದ್ಯೋಗ ಜಾಲದ ರೂವಾರಿಗಳಿಂದ ಕೋಟ್ಯಂತರ ರೂ. ವಂಚನೆ!

Share

ಧಾರವಾಡ:ಇತ್ತೀಚೆಗೆ ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ SDA ನೌಕರನಾಗಿ ಕೆಲಸ ಮಾಡುತ್ತಿದ್ದ ರೇವಪ್ಪ ದುರದುಂಡಿ ಎಂಬಾತ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆತ್ಮಹತ್ಯೆಗೆ ಕೋಟ್ಯಂತರ ರೂಪಾಯಿ ಹಣದ ವ್ಯವಹಾರವೇ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕಲಾರಕೊಪ್ಪದ ನಿವಾಸಿಯಾಗಿದ್ದ ರೇವಪ್ಪ, ಇದೇ ತಿಂಗಳ 24 ರಂದು ಧಾರವಾಡದ ಮದಿಹಾಳದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಆದರೆ ಈತ ನಿರುದ್ಯೋಗಿ ಯುವಕರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, ಅವರಿಂದ ಅಂದಾಜು 4 ಕೋಟಿ ರೂಪಾಯಿ ಹಣ ಪಡೆದಿದ್ದ ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ.

 

ನಿರುದ್ಯೋಗಿ ಯುವಕರಿಂದ ಪಡೆದ ಹಣವನ್ನು ಈತ ಸಿಕಂದ‌ರ್ ಚೌಧರಿ, ಹಸನ್‌ಸಾಬ್ ರಂಜಣಗಿ, ದಿಲೀಪ್ ಕುಮಾ‌ರ್ ಆಚಾರ್ಯ ಹಾಗೂ ಕಾಮಪ್ಪ ಪೂಜಾರಿ ಎಂಬುವವರಿಗೆ ನೀಡಿದ್ದ. ಈ ನಾಲ್ವರು ಕಿಂಗ್‌ಪಿನ್‌ಗಳು ನಿರುದ್ಯೋಗಿ ಯುವಕರಿಗೆ ಕೆಲಸ ಕೊಡಿಸುವುದಾಗಿ ಹೇಳಿದ್ದರು. ಇವರಿಗೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ರೇವಪ್ಪ, ಸಾಕಷ್ಟು ಯುವಕರಿಂದ ಒಟ್ಟು 4 ಕೋಟಿಯಷ್ಟು ಹಣ ಸಂಗ್ರಹಿಸಿ ಕಿಂಗ್‌ಪಿನ್‌ಗಳಿಗೆ ತಲುಪಿಸಿದ್ದ. ಒಳಚರಂಡಿ ಇಲಾಖೆ, ನೀರಾವರಿ ಇಲಾಖೆ, RTO, ಪೊಲೀಸ್‌ ಇಲಾಖೆ, SDA, FDA ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಲಾಗಿತ್ತು.

 

ಆದರೆ ಹಣ ನೀಡಿ ಹಲವು ವರ್ಷಗಳೇ ಕಳೆದರೂ ಯುವಕರಿಗೆ ಉದ್ಯೋಗ ಸಿಕ್ಕಿರಲಿಲ್ಲ. ಹೀಗಾಗಿ ತಾವು ಕೊಟ್ಟ ಹಣವನ್ನು ವಾಪಸ್ ನೀಡುವಂತೆ ಯುವಕರು ರೇವಪ್ಪನಿಗೆ ದಂಬಾಲು ಬಿದ್ದಿದ್ದರು. ಇದರಿಂದ ಕಂಗಾಲಾದ ರೇವಪ್ಪ, ಯುವಕರು ಹಣ ವಾಪಸ್ ಕೇಳುತ್ತಿದ್ದಾರೆ, ಅವರ ಹಣವನ್ನು ಮರಳಿಸಿ ಎಂದು ಕಿಂಗ್‌ಪಿನ್‌ಗಳಿಗೆ ಮನವಿ ಮಾಡಿದ್ದ. ಆದರೆ, ಆ ನಾಲ್ವರೂ ರೇವಪ್ಪನ ಮಾತಿಗೆ ಕಿವಿಗೊಡಲಿಲ್ಲ. ಇದರಿಂದ ತೀವ್ರ ಮಾನಸಿಕ ಕಿರುಕುಳಕ್ಕೊಳಗಾದ ರೇವಪ್ಪ ತನ್ನ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಯಾರ್ಯಾರು ದುಡ್ಡು ಪಡೆದಿದ್ದಾರೆ ಹಾಗೂ ಏನೆಲ್ಲ ಘಟನೆ ನಡೆದಿತ್ತು ಎಂಬುದನ್ನು ರೇವಪ್ಪ ಡೆತ್ ನೋಟ್‌ನಲ್ಲೂ ಬರೆದಿಟ್ಟಿದ್ದಾನೆ ಎನ್ನಲಾಗಿದೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಶಹರ ಠಾಣೆ ಪೊಲೀಸರು ಇದೀಗ 10 ಜನರ ವಿರುದ್ಧ FIR ದಾಖಲಿಸಿದ್ದಾರೆ. ಸಿಕಂದರ್‌ ಚೌಧರಿ, ಹಸನ್‌ಸಾಬ್ ರಂಜಣಗಿ, ದಿಲೀಪ್ ಕುಮಾರ್ ಆಚಾರ್ಯ, ಕಾಮಪ್ಪ ಪೂಜಾರಿ ಸೇರಿದಂತೆ ಉತ್ತರ ಕನ್ನಡ ಹಾಗೂ ಬೆಂಗಳೂರು ಮೂಲದ ನಾಲ್ವರು ಕಿಂಗ್‌ಪಿನ್‌ಗಳ ಮೇಲೆ ಎಫ್‌ಐಆರ್ ಹೂಡಲಾಗಿದೆ. ಕಿಂಗ್‌ಪಿನ್‌ಗಳಿಗೆ ಮಧ್ಯವರ್ತಿಯಾಗಿ ಕೆಲಸ ಮಾಡಿ ಹಣ ಕೊಡಿಸಿದ್ದ ರೇವಪ್ಪ, ತಾನು ಮೋಸಕ್ಕೊಳಗಾಗಿದ್ದೇನೆ ಎಂದು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಪತಿಯ ಸಾವಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ರೇವಪ್ಪನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

 

KPSC ಮಾದರಿಯಲ್ಲೇ ಕಿಂಗ್‌ಪಿನ್‌ಗಳು ಹಣ ಪಡೆದು ಕೆಲಸ ಕೊಡಿಸುವ ಆಸೆ ಹುಟ್ಟಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಧಾರವಾಡ ಶಹರ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಪ್ರಕರಣದ ಅಸಲಿ ಸತ್ಯ ಶೀಘ್ರದಲ್ಲೇ ಹೊರಬರಬೇಕಾಗಿದೆ.

Tags:

error: Content is protected !!