ಧಾರವಾಡ: ಪಶ್ಚಿಮ ಪದವೀಧರ ಮತಕ್ಷೇತ್ರದ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಸತತ ಮೂರನೇ ಬಾರಿಗೆ ಬಿಜೆಪಿ-ಜೆಡಿಎಸ್ (ಎನ್ಡಿಎ) ಅಭ್ಯರ್ಥಿ ಗೆದ್ದು ಬೀಗಿದ್ದಾರೆ. ‘ಚಿಂತಕರ ಚಾವಡಿ’ ಎಂದೇ ಕರೆಯಲ್ಪಡುವ ವಿಧಾನ ಪರಿಷತ್ಗೆ ಎಸ್.ವಿ. ಸಂಕನೂರ ಅವರು ಮೂರನೇ ಬಾರಿಗೆ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದು, ತಡರಾತ್ರಿಯೇ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು.
ನಾಲ್ಕು ಪರಿಷತ್ ಕ್ಷೇತ್ರಗಳ ವ್ಯಾಪ್ತಿ ಹೊಂದಿರುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಫಲಿತಾಂಶ ಅಂತಿಮವಾಗಿ ಮಂಗಳವಾರ ತಡರಾತ್ರಿ ಪ್ರಕಟವಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಹಾಗೂ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ, ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಕೊನೆಯವರೆಗೂ ಮುನ್ನಡೆ ಸಾಧಿಸಿದ ಬಿಜೆಪಿಯ ಸಂಕನೂರ, 9,323 ಮತಗಳ ಅಂತರದಿಂದ ಗೆದ್ದು ಸತತ ಮೂರನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದರು.
ಪಶ್ಚಿಮ ಪದವೀಧರರ ಚುನಾವಣೆಯಲ್ಲಿ ಒಟ್ಟು 73,691 ಮತಗಳು ಚಲಾವಣೆಯಾಗಿದ್ದವು. ಆ ಪೈಕಿ 10,245 ಮತಗಳು ತಿರಸ್ಕಾರಗೊಂಡರೆ, 63,446 ಮತಗಳು ಪುರಸ್ಕೃತಗೊಂಡಿದ್ದವು. ಅವುಗಳಲ್ಲಿ ಎಸ್.ವಿ. ಸಂಕನೂರ ಅವರು 33,711 ಮತಗಳನ್ನು ಪಡೆದರೆ, ಕಾಂಗ್ರೆಸ್ನ ಲಿಂಬಿಕಾಯಿ ಅವರು 24,388 ಮತಗಳನ್ನು ಪಡೆಯಲು ಶಕ್ತರಾದರು. ಇನ್ನು ಪಕ್ಷೇತರ ಅಭ್ಯರ್ಥಿಯಾಗಿದ್ದ ಕಾಂತಕುಮಾರ್ ಅವರು 4,055 ಮತಗಳನ್ನು ಪಡೆದುಕೊಂಡರು.
ಪಶ್ಚಿಮ ಪದವೀಧರ ಕ್ಷೇತ್ರದ ಅಂತಿಮ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಫಲಿತಾಂಶ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ಮಹೇಶ ತೆಂಗಿನಕಾಯಿ ಹಾಗೂ ಎನ್ಡಿಎ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಸಂಭ್ರಮಿಸಿದರು. ಬಳಿಕ ಮಾತನಾಡಿದ ಶಾಸಕ ಮಹೇಶ ತೆಂಗಿನಕಾಯಿ ಅವರು, ಎರಡು ಶಿಕ್ಷಕರ ಕ್ಷೇತ್ರ ಹಾಗೂ ಎರಡು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಎನ್ಡಿಎ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿತ್ತು; ನಾವು ಮತದಾರರ ವಿಶ್ವಾಸವನ್ನು ಉಳಿಸಿಕೊಂಡಿದ್ದೇವೆ ಎಂದು ಹೇಳುವ ಮೂಲಕ ಅಭ್ಯರ್ಥಿಗಳಿಗೆ ಮತ್ತು ಕಾರ್ಯಕರ್ತರಿಗೆ ಶುಭಾಶಯ ಕೋರಿದರು.
ಎಲ್ಲಾ ಐದೂ ಸುತ್ತುಗಳ ಮತ ಎಣಿಕೆಯ ನಂತರ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು 9,323 ಮತಗಳ ಅಂತರದಿಂದ ಗೆಲುವು ದಾಖಲಿಸಿದರು. “ಈ ಚುನಾವಣೆ 2028ರ ವಿಧಾನಸಭಾ ಚುನಾವಣೆಗೆ ದಿಕ್ಕೂಚಿ. ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿದ್ದು, ಎನ್ಡಿಎ ಮೈತ್ರಿಕೂಟಕ್ಕೆ ಮತದಾರರು ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಬ್ಯಾಲೆಟ್ ಪೇಪರ್ ಮುಖಾಂತರ ಚುನಾವಣೆ ನಡೆಸಬೇಕು ಎನ್ನುತ್ತಿದ್ದರು. ಈಗ ನಡೆದ ಬ್ಯಾಲೆಟ್ ಪೇಪರ್ ಚುನಾವಣೆಯಲ್ಲೂ ಎನ್ಡಿಎ ಗೆಲುವು ದಾಖಲಿಸಿದೆ. ಇನ್ಮೇಲೆ ಯಾವ ಪೇಪರ್ ಮೇಲೆ ಚುನಾವಣೆ ನಡೆಸಬೇಕು ಎಂಬುದನ್ನು ಕಾಂಗ್ರೆಸ್ನವರೇ ಹೇಳಬೇಕು” ಎಂದು ಶಾಸಕ ಮಹೇಶ್ ತೆಂಗಿನಕಾಯಿ ಇದೇ ಸಂದರ್ಭದಲ್ಲಿ ಲೇವಡಿ ಮಾಡಿದರು.
ಒಟ್ಟಾರೆಯಾಗಿ, ಮಂಗಳವಾರ ತಡರಾತ್ರಿ 1 ಗಂಟೆಯವರೆಗೂ ಮತ ಎಣಿಕೆ ನಡೆದು, ಐದೂವರೆ ಸುತ್ತುಗಳ ನಂತರ ಅಂತಿಮ ಫಲಿತಾಂಶ ಪ್ರಕಟಗೊಂಡಿದೆ. ಬಿಜೆಪಿ ಅಭ್ಯರ್ಥಿ ಸತತ ಮೂರನೇ ಬಾರಿಗೆ ಗೆಲುವಿನ ಮಾಲೆ ಮುಡಿಗೇರಿಸಿಕೊಂಡಿದ್ದು, ಗೆಲುವಿನ ಸಂಭ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ತೇಲುತ್ತಿದ್ದಾರೆ.
