ಸಾಕಷ್ಟು ಗೊಂದಲದ ನಡುವೆಯೂ ವಿಜಯಪುರ ಜಿಲ್ಲೆಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 17 ಲಕ್ಷದ 8 ಸಾವಿರದ 99 ಮತದಾರರಿದ್ದಾರೆ. ಇವರಲ್ಲಿ 8 ಲಕ್ಷದ 69 ಸಾವಿರದ 149 ಪುರುಷರು ಹಾಗೂ 8 ಲಕ್ಷದ 38 ಸಾವಿರದ 768 ಮಹಿಳಾ ಮತದಾರರಿದ್ದಾರೆ. ಇನ್ನು 182 ಇತರೆ ಮತದಾರರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ-2026 ಪ್ರಕ್ರಿಯೆ ಪೂರ್ಣಗೊಂಡಿದ್ದು, ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಅಂತಿಮ ಪಟ್ಟಿ ಪ್ರಕಟಿಸಿದ್ದಾರೆ. ಹಾಗಾದ್ರೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಹೌದು… ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ-2026ರ ಅಡಿಯಲ್ಲಿ ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಕರಡು ಪಟ್ಟಿ ಪ್ರಕಟಿಸಿದ ಬಳಿಕ ಆಗಸ್ಟ್ 24ರಿಂದ ಅಕ್ಟೋಬರ್ 22ರವರೆಗೆ ಸಾರ್ವಜನಿಕರಿಂದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿತ್ತು. ಸ್ವೀಕೃತ ಹಕ್ಕು ಮತ್ತು ಆಕ್ಷೇಪಣೆ ಗಳನ್ನು ಪರಿಶೀಲಿಸಿ, ಅಗತ್ಯ ಕ್ರಮಗಳನ್ನು ಕೈಗೊಂಡ ನಂತರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜಿಲ್ಲೆಯ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷದ 95 ಸಾವಿರದ 286 ಮತದಾರರಿದ್ದರೆ, ದೇವರಹಿಪ್ಪರಗಿ ಕ್ಷೇತ್ರದಲ್ಲಿ 2 ಲಕ್ಷದ 2 ಸಾವಿರದ 658 ಮತದಾರರಿದ್ದಾರೆ. ಬಸವನ ಬಾಗೇವಾಡಿ ಕ್ಷೇತ್ರದಲ್ಲಿ 1 ಲಕ್ಷದ 99 ಸಾವಿರದ 685 ಹಾಗೂ ಬಬಲೇಶ್ವರ ಕ್ಷೇತ್ರದಲ್ಲಿ 2 ಲಕ್ಷದ 3 ಸಾವಿರದ 952 ಮತದಾರರಿದ್ದಾರೆ.
ಇನ್ನು ಬಿಜಾಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ 2 ಲಕ್ಷದ 13 ಸಾವಿರದ 68 ಮತದಾರರಿದ್ದಾರೆ.
ನಾಗಠಾಣ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಂದರೆ 2 ಲಕ್ಷದ 42 ಸಾವಿರದ 549 ಮತದಾರರಿದ್ದಾರೆ. ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ 2 ಲಕ್ಷದ 29 ಸಾವಿರದ 479 ಹಾಗೂ ಸಿಂದಗಿ ಕ್ಷೇತ್ರದಲ್ಲಿ 2 ಲಕ್ಷದ 21 ಸಾವಿರದ 422 ಮತದಾರರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ವಿಜಯಪುರ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 8 ಲಕ್ಷದ 69 ಸಾವಿರದ 149 ಪುರುಷರು, 8 ಲಕ್ಷದ 38 ಸಾವಿರದ 768 ಮಹಿಳೆಯರು ಹಾಗೂ 182 ಇತರೆ ಮತದಾರರು ಸೇರಿದಂತೆ ಒಟ್ಟು 17 ಲಕ್ಷದ 8 ಸಾವಿರದ 99 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಆನಂದ ಕೆ. ತಿಳಿಸಿದ್ದಾರೆ.
ಒಟ್ಟಿನಲ್ಲಿ, ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಬಳಿಕ ವಿಜಯಪುರ ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದ್ದು, ನಾಗಠಾಣ ವಿಧಾನಸಭಾ ಕ್ಷೇತ್ರವು ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರವಾಗಿ ಹೊರಹೊಮ್ಮಿದೆ.
