Vijaypura

ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ!

Share

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿದ್ದ ಬಸ್ ಏಕಾಏಕಿ ಹಿಮ್ಮುಖವಾಗಿ ಚಲಿಸಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಬಸ್ ನಿಲ್ದಾಣದ ಡಿಪೋ ಗೇಟ್‌ಗೆ ಡಿಕ್ಕಿ ಹೊಡೆದು ನಿಂತಿದ್ದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ನಿಂತಿದ್ದ ಬಸ್‌ನ ಚಾಲಕ ಹೊರಗೆ ತೆರಳಿದ್ದರು. ಇತ್ತ ನಿರ್ವಾಹಕರು ಡ್ಯೂಟಿ ಎಂಟ್ರಿ ಮಾಡಿಸಲು ಹೋಗಿದ್ದ ವೇಳೆ ಬಸ್ ಏಕಾಏಕಿ ಹಿಮ್ಮುಖವಾಗಿ ಚಲಿಸಲು ಆರಂಭಿಸಿದೆ. ಇದನ್ನು ಕಂಡ ಬಸ್‌ನಲ್ಲಿದ್ದ ಪ್ರಯಾಣಿಕರು ಹಾಗೂ ನಿಲ್ದಾಣದಲ್ಲಿದ್ದ ಜನರು ಗಾಬರಿಗೊಂಡು ಪಕ್ಕಕ್ಕೆ ಸರಿದಿದ್ದಾರೆ. ಬಸ್ ಹಿಮ್ಮುಖವಾಗಿ ಚಲಿಸುತ್ತಾ ಡಿಪೋ ಗೇಟ್‌ಗೆ ಡಿಕ್ಕಿ ಹೊಡೆದು ನಿಂತಿದೆ. ಈ ಘಟನೆಯಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಲಭ್ಯವಾದ ಪ್ರಾಥಮಿಕ ಮಾಹಿತಿಯ ಪ್ರಕಾರ, ಮಹಿಳೆಯೊಬ್ಬರು ಚಾಲಕನ ಬಾಗಿಲಿನ ಮೂಲಕ ಬಸ್ ಹತ್ತಿ ಕ್ಲಚ್ ಮೇಲೆ ಕಾಲಿಟ್ಟ ಪರಿಣಾಮ ಬಸ್ ಹಿಮ್ಮುಖವಾಗಿ ಚಲಿಸಿರಬಹುದು ಎನ್ನಲಾಗಿದೆ. ಬಸ್ ಚಲಿಸಲು ಆರಂಭಿಸುತ್ತಿದ್ದಂತೆ ಗಾಬರಿಗೊಂಡ ಮಹಿಳೆ ಕೆಳಗಿಳಿದು ಸ್ಥಳದಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ.

Tags:

error: Content is protected !!