Vijaypura

ಬಿರು ಬಿಸಿಲನ್ನೂ ಲೆಕ್ಕಿಸದೆ ತುಳಜಾಪುರದತ್ತ ಭಕ್ತರ ಹೆಜ್ಜೆ!

Share

ಭಕ್ತಿ… ಶ್ರದ್ಧೆ… ಅಚಲ ನಂಬಿಕೆ… ತಾಯಿ ತುಳಜಾಭವಾನಿಯ ದರ್ಶನಕ್ಕಾಗಿ ಲಕ್ಷಾಂತರ ಭಕ್ತರ ಹೆಜ್ಜೆಗಳು ತುಳಜಾಪುರದತ್ತ ಸಾಗಿವೆ. ಬಿರು ಬಿಸಿಲನ್ನೂ ಲೆಕ್ಕಿಸದೆ ಮಕ್ಕಳು, ಮಹಿಳೆಯರು, ಯುವಕರು ಹಾಗೂ ವಯೋವೃದ್ಧರು ಪಾದಯಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ. ವಿಜಯಪುರ, ಬೆಳಗಾವಿ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ತುಳಜಾಪುರ ನಗರವೇ ಭಕ್ತಿಸಾಗರವಾಗಿ ಮಾರ್ಪಟ್ಟಿದೆ. ಜೈ ಶಿವಾಜಿ… ಜೈ ಭವಾನಿ ಘೋಷಣೆಗಳ ನಡುವೆ, ಡೊಳ್ಳು, ಸಂಗೀತ ಹಾಗೂ ನೃತ್ಯದೊಂದಿಗೆ ಸಾಗಿದ ಈ ಭಕ್ತಿಯ ಪಯಣ ಹೇಗಿತ್ತು? ಭಕ್ತರಿಗೆ ದಾರಿಯುದ್ದಕ್ಕೂ ದೊರೆತ ಸೇವೆಗಳೇನು? ತುಳಜಾಭವಾನಿಯ ಸನ್ನಿಧಿಯಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳೇನು? ಇಲ್ಲಿದೆ ನಮ್ಮ ವಿಶೇಷ ವರದಿ.

ಬಿರು ಬಿಸಿಲು… ಉದ್ದನೆಯ ಹೆದ್ದಾರಿ… ಕಾಲಿಗೆ ಚಪ್ಪಲಿ ಇದ್ದರೂ ಇಲ್ಲದಿದ್ದರೂ, ಮನದಲ್ಲಿ ಮಾತ್ರ ತಾಯಿ ತುಳಜಾಭವಾನಿಯ ದರ್ಶನದ ಹಂಬಲ! ಹೀಗೆ ಸಾಗಿತು ಭಕ್ತರ ಪಾದಯಾತ್ರೆ. ವಿಜಯಪುರ, ಬೆಳಗಾವಿ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ತುಳಜಾಪುರದತ್ತ ಹೆಜ್ಜೆ ಹಾಕಿದರು. ಮಕ್ಕಳು, ಯುವಕರು, ಮಹಿಳೆಯರು ಹಾಗೂ ವಯೋವೃದ್ಧರು ಎನ್ನುವ ಭೇದವಿಲ್ಲದೆ ಎಲ್ಲರೂ ಭಕ್ತಿಯ ಪಯಣದಲ್ಲಿ ಪಾಲ್ಗೊಂಡರು. ಆಯಿ ರಾಧಾ ಉಧೇ ಉಧೇ ಉಧೇ… ಸದಾನಂದಿಚಾ ಉದೇ ಉದೇ ಉದೇ… ಜೈ ಶಿವಾಜಿ… ಜೈ ಭವಾನಿ… ಎಂಬ ಘೋಷಣೆಗಳು ದಾರಿಯುದ್ದಕ್ಕೂ ಮೊಳಗಿದವು. ಡೊಳ್ಳು, ಸಂಗೀತ ಹಾಗೂ ನೃತ್ಯದ ಮೂಲಕ ಭಕ್ತರು ತಮ್ಮ ಭಕ್ತಿಯ ಸಂಭ್ರಮವನ್ನು ವ್ಯಕ್ತಪಡಿಸಿದರು. ಶ್ರಮದ ನಿದ್ರೆಯಲ್ಲಿದ್ದ ತಾಯಿ ತುಳಜಾಭವಾನಿಯನ್ನು ಜಾಗೃತಗೊಳಿಸುವ ಧಾರ್ಮಿಕ ಪರಂಪರೆಯೊಂದಿಗೆ ಭಕ್ತರ ಈ ಪಾದಯಾತ್ರೆ ವಿಶೇಷ ಗಮನ ಸೆಳೆಯಿತು. ಭಕ್ತರ ಅಪಾರ ಸಂಚಾರದ ಹಿನ್ನೆಲೆಯಲ್ಲಿ ಧಾರಾಶಿವ ಜಿಲ್ಲಾಡಳಿತ ನಾಲ್ಕು ದಿನಗಳ ಕಾಲ ಹೆದ್ದಾರಿ ಸಂಚಾರ ನಿರ್ಬಂಧಿಸುವ ಕ್ರಮ ಕೈಗೊಂಡಿತ್ತು. ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮತ್ತೊಂದೆಡೆ, ವಿವಿಧ ಸಂಘ-ಸಂಸ್ಥೆಗಳು ದಾರಿಯುದ್ದಕ್ಕೂ ಅನ್ನಸಂತರ್ಪಣೆ, ಚಹಾ, ಬಿಸ್ಕಿಟ್ ಹಾಗೂ ಹಣ್ಣುಹಂಪಲು ವಿತರಿಸುವ ಮೂಲಕ ಭಕ್ತರ ಸೇವೆಯಲ್ಲಿ ತೊಡಗಿದ್ದವು. ವೈದ್ಯಕೀಯ ಶಿಬಿರಗಳು ಹಾಗೂ ಸ್ವಯಂಸೇವಕರ ತಂಡಗಳು ಭಕ್ತರಿಗೆ ನೆರವಾದವು.

ಇನ್ನೂ ತುಳಜಾ ಭವಾನಿಯ ಮೇಲಿನ ಭಕ್ತಿ ಜನಸಾಮಾನ್ಯರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಧಾರಾಶಿವ ಜಿಲ್ಲಾಧಿಕಾರಿ ಕಿರಣ್ ಕಾರ್ತಿಕ ಪೂಜಾರಿ ಅವರು ತಮ್ಮ ಪತ್ನಿಯೊಂದಿಗೆ ಪಾದಯಾತ್ರೆ ನಡೆಸಿ ಹರಕೆ ತೀರಿಸಿದರು. ಭಕ್ತರ ಅನುಕೂಲಕ್ಕಾಗಿ ಆಡಳಿತ ವ್ಯವಸ್ಥೆ ಸಿದ್ಧವಾಗಿದ್ದರೆ, ಮತ್ತೊಂದೆಡೆ ಭಕ್ತರು ತಾಯಿಯ ದರ್ಶನಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಭಾನುವಾರ ಒಂದೇ ದಿನ ಹತ್ತು ಲಕ್ಷಕ್ಕೂ ಅಧಿಕ ಭಕ್ತರು ತುಳಜಾಪುರಕ್ಕೆ ಆಗಮಿಸಿದರೆಂಬ ಅಂದಾಜಿನ ನಡುವೆ, ನಗರದೆಲ್ಲೆಡೆ ಜನಜಂಗುಳಿ ಕಂಡುಬಂತು. ದೇವಿಯ ಅಭಿಷೇಕದಲ್ಲಿ ಪಾಲ್ಗೊಂಡರೆ ಬದುಕು ಬಂಗಾರವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ತಾಯಿ ತುಳಜಾಭವಾನಿಯ ಕೃಪೆ ತಮ್ಮ ಕುಟುಂಬದ ಮೇಲೆ ಸದಾ ಇರಲಿ, ಸಂಕಷ್ಟಗಳು ದೂರವಾಗಿ ಸುಖ-ಸಮೃದ್ಧಿ ನೆಲೆಸಲಿ ಎಂಬ ಪ್ರಾರ್ಥನೆಯೊಂದಿಗೆ ಭಕ್ತರು ದೇವಿಯ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು. ರಾತ್ರಿ ಜಾಗರಣೆ, ವಿಶೇಷ ಪೂಜೆ-ಪುನಸ್ಕಾರಗಳು ಹಾಗೂ ಧಾರ್ಮಿಕ ವಿಧಿವಿಧಾನಗಳಿಗೆ ಸಿದ್ಧತೆಗಳು ನಡೆದವು. ಮೆರವಣಿಗೆಯ ಮೂಲಕ ದೇವಿಯ ಮೂರ್ತಿಯನ್ನು ಸಿಂಹಾಸನದ ಮೇಲೆ ಪ್ರತಿಷ್ಠಾಪಿಸುವ ಪವಿತ್ರ ಸಂಪ್ರದಾಯವೂ ಭಕ್ತರ ಆಕರ್ಷಣೆಯ ಕೇಂದ್ರವಾಗಿತ್ತು. ತುಳಜಾಪುರದ ಬೀದಿ ಬೀದಿಗಳಲ್ಲಿ ಭಕ್ತಿಯ ಸಂಭ್ರಮ ಮನೆಮಾಡಿದ್ದು, ತಾಯಿಯ ನಾಮಸ್ಮರಣೆಯೊಂದಿಗೆ ಇಡೀ ನಗರವೇ ಧಾರ್ಮಿಕ ಕ್ಷೇತ್ರವಾಗಿ ಕಂಗೊಳಿಸಿತು.

ಒಟ್ಟಾರೆ, ನೂರಾರು ಕಿಲೊ ಮೀಟರ್ ನಡೆದ ಕಾಲುಗಳು ದಣಿದರೂ ಭಕ್ತಿ ದಣಿಯಲಿಲ್ಲ… ಬಿಸಿಲು ಸುಟ್ಟರೂ ನಂಬಿಕೆ ಬಾಡಲಿಲ್ಲ… ನೂರಾರು ಕಿಲೋಮೀಟರ್‌ಗಳ ಪಯಣವಾದರೂ ತಾಯಿಯ ದರ್ಶನದ ಹಂಬಲ ಕಡಿಮೆಯಾಗಲಿಲ್ಲ. ತುಳಜಾಭವಾನಿಯ ಪಾದಸ್ಪರ್ಶಕ್ಕಾಗಿ ಹೆಜ್ಜೆ ಹಾಕಿದ ಪ್ರತಿಯೊಬ್ಬ ಭಕ್ತನ ಮನದಲ್ಲೂ ಒಂದೇ ಪ್ರಾರ್ಥನೆ — ತಾಯಿ, ನಮ್ಮ ಕುಟುಂಬವನ್ನು ಸದಾ ಕಾಪಾಡು… ನಮ್ಮ ಬದುಕಿನಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸುವಂತೆ ಮಾಡು. ಭಕ್ತರ ಪಾಲಿಗೆ ತುಳಜಾಭವಾನಿ ಕೇವಲ ಆರಾಧ್ಯ ದೇವಿಯಲ್ಲ; ಆಕೆ ಮನೆ-ಮನಗಳ ಶ್ರೀರಕ್ಷೆ, ಸಂಕಷ್ಟಗಳ ಸಮಯದ ಆಶಾಕಿರಣ, ಬದುಕಿನ ನಂಬಿಕೆ. ಆ ನಂಬಿಕೆಯೇ ಲಕ್ಷಾಂತರ ಹೆಜ್ಜೆಗಳಿಗೆ ಶಕ್ತಿ ತುಂಬಿದೆ. ತುಳಜಾ ಭವಾನಿಯ ನಾಮಸ್ಮರಣೆಯೊಂದಿಗೆ ಭಕ್ತಿಯ ಈ ಪಯಣ ಮುಂದುವರಿದಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!