ಕೊಲ್ಹಾಪುರ: ಆಸ್ಟರ್ ಆಧಾರ್ ಆಸ್ಪತ್ರೆಯಲ್ಲಿ ಬ್ರೇನ್ ಡೆಡ್ ಆದ 22 ವರ್ಷದ ಕೃಷಿ ವಿದ್ಯಾರ್ಥಿ ಪ್ರಣವ್ ಸಂಭಾಜಿ ಕುಂಭಾರ್ ಅವರ ಕುಟುಂಬಸ್ಥರು ಕೈಗೊಂಡ ಅಂಗಾಂಗ ದಾನದ ನಿರ್ಧಾರದಿಂದ ಆರು ಜನರಿಗೆ ಹೊಸ ಜೀವನ ಲಭಿಸಿದೆ. ಗ್ರೀನ್ ಕಾರಿಡಾರ್ ಹಾಗೂ ಏರ್ ಆಂಬುಲೆನ್ಸ್ ಮೂಲಕ ಅತ್ಯಂತ ವೇಗವಾಗಿ ಅಂಗಾಂಗಗಳನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ರವಾನಿಸಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಯುವಕನ ತಾಯಿಯ ಈ ಮಾನವೀಯ ನಿರ್ಧಾರವು ಇಡೀ ಸಮಾಜಕ್ಕೇ ಮಾದರಿಯಾಗಿದೆ.
ಕೊಲ್ಹಾಪುರದ ನಿವಾಸಿ, ಕೃಷಿ ಕಾಲೇಜಿನ ತೃತೀಯ ವರ್ಷದ ವಿದ್ಯಾರ್ಥಿ ಹಾಗೂ ರಾಜ್ಯ ಮಟ್ಟದ ಫುಟ್ಬಾಲ್ ಆಟಗಾರ ಪ್ರಣವ್ ಸಂಭಾಜಿ ಕುಂಭಾರ್ ಆಟದ ನಂತರ ತಲೆಸುತ್ತು ಬಂದು ಕುಸಿದುಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಟರ್ ಆಧಾರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ವೈದ್ಯರು ಅವರನ್ನು ಬ್ರೇನ್ ಡೆಡ್ ಎಂದು ಘೋಷಿಸಿದರು. ಈ ಕಠಿಣ ಪರಿಸ್ಥಿತಿಯಲ್ಲಿ ಪ್ರಣವ್ ಅವರ ತಾಯಿ ಮತ್ತು ಕುಟುಂಬಸ್ಥರು ಧೈರ್ಯದಿಂದ ಅಂಗಾಂಗ ದಾನಕ್ಕೆ ಸಮ್ಮತಿಸಿದರು. ZTCC ಮಾರ್ಗದರ್ಶಕಿ ಡಾ. ಆರತಿ ಗೋಖಲೆ ಅವರ ನೇತೃತ್ವದಲ್ಲಿ, ಪ್ರಣವ್ ಅವರ ಎರಡು ಮೂತ್ರಪಿಂಡಗಳು, ಯಕೃತ್ತು (ಲಿವರ್), ಶ್ವಾಸಕೋಶ ಹಾಗೂ ಎರಡು ಕಣ್ಣಿನ ಕಾರ್ನಿಯಾಗಳನ್ನು ದಾನ ಮಾಡಲಾಯಿತು. ಇದರಲ್ಲಿ ಒಂದು ಮೂತ್ರಪಿಂಡವನ್ನು ಆಸ್ಟರ್ ಆಧಾರ್ ಆಸ್ಪತ್ರೆಯ ರೋಗಿಗೆ ಹಾಗೂ ಮತ್ತೊಂದನ್ನು ಪುಣೆಯ ರೂಬಿ ಹಾಲ್ ಕ್ಲಿನಿಕ್ಗೆ ಗ್ರೀನ್ ಕಾರಿಡಾರ್ ಮೂಲಕ ಕಳುಹಿಸಲಾಯಿತು. ಶ್ವಾಸಕೋಶವನ್ನು ಏರ್ ಆಂಬುಲೆನ್ಸ್ ಮೂಲಕ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ರವಾನಿಸಿದರೆ, ಯಕೃತ್ತನ್ನು ಪುಣೆಯ ಆದಿತ್ಯ ಬಿರ್ಲಾ ಆಸ್ಪತ್ರೆಗೆ ತಲುಪಿಸಲಾಯಿತು.
ಈ ಇಡೀ ಪ್ರಕ್ರಿಯೆಯಲ್ಲಿ ಆಸ್ಟರ್ ಆಧಾರ್ ಆಸ್ಪತ್ರೆಯ ವೈದ್ಯರಾದ ಡಾ. ಧನಸಾಗರ್ ವಾಕಳೆ, ಡಾ. ಯುವರಾಜ್ ಸಾವಂತ್, ಡಾ. ಭೂಪೇಂದ್ರ ಪಾಟೀಲ್, ಡಾ. ಅಜಯ್ ಕೇಣಿ, ಡಾ. ಅಮೋಲ್ ಕೋಡೋಲಿಕರ್, ಡಾ. ನಿಧಿ ಭೋಸಲೆ, ಡಾ. ಅಭೀಜಿತ್ ಗವಳಿ ಹಾಗೂ ಡಾ. ಮಯುರಾ ಪೂಜಾರಿ ಅವರನ್ನೊಳಗೊಂಡ ವೈದ್ಯಕೀಯ ತಂಡವು ಪ್ರಮುಖ ಪಾತ್ರ ವಹಿಸಿತು. ಜೊತೆಗೆ ಎಂಜಿಎಂ ಆಸ್ಪತ್ರೆ ಚೆನ್ನೈ, ಆದಿತ್ಯ ಬಿರ್ಲಾ ಆಸ್ಪತ್ರೆ ಹಾಗೂ ಡಿ. ವೈ. ಪಾಟೀಲ್ ಆಸ್ಪತ್ರೆ ಪುಣೆಯ ವೈದ್ಯಕೀಯ ತಂಡಗಳು ಮತ್ತು ಪೊಲೀಸ್ ಆಡಳಿತ ಶ್ಲಾಘನೀಯ ಸಹಕಾರ ನೀಡಿದವು. ಈ ಸಂದರ್ಭದಲ್ಲಿ ಆಸ್ಪತ್ರೆಯ ಎಂಡಿ ಡಾ. ಉಲ್ಲಾಸ್ ದಾಮ್ಲೆ ಮತ್ತು ಸಿಒಒ ಡಾ. ಡ್ಯಾಲನ್ ಫರ್ನಾಂಡಿಸ್ ಅವರು ಪ್ರಣವ್ ಅವರ ಕುಟುಂಬದ ತ್ಯಾಗವನ್ನು ಶ್ಲಾಘಿಸಿ, ಗೌರವ ಪತ್ರ ನೀಡಿ ಗೌರವಿಸಿದರು.
