ವಿಜಯಪುರ ನಗರ ಕ್ಷೇತ್ರದಲ್ಲಿ ಎಸ್‌ಐಆರ್ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರ ರಾಜಕೀಯ ಆರೋಪ–ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಮುಸ್ಲಿಂ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಿಸುವ ಉದ್ದೇಶದಿಂದ ಫಾರ್ಮ್-7ರಲ್ಲಿ ಸುಳ್ಳು ಆಕ್ಷೇಪಣೆಗಳನ್ನು ಸಲ್ಲಿಸಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್ ಮಾಡಿರುವ ಆರೋಪಗಳೇನು? ಈ ಆರೋಪಕ್ಕೆ ಯತ್ನಾಳ ಬೆಂಬಲಿಗರ ತಿರುಗೇಟು ಏನು? ಎನ್ನೂವ ಕುರಿತು ಇಲ್ಲಿದೆ ಡಿಟೇಲ್ಸ್…

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಐಆರ್ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು. ಮುಸ್ಲಿಂ ಮತದಾರರನ್ನು ಗುರಿಯಾಗಿಸಿಕೊಂಡು, ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಿಸುವ ಉದ್ದೇಶದಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಬೆಂಬಲಿಗರು ಫಾರ್ಮ್-7ರಲ್ಲಿ ಸುಳ್ಳು ಆಕ್ಷೇಪಣೆಗಳನ್ನು ಸಲ್ಲಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್ ಆರೋಪಿಸಿದ್ದರು. ಹಲವು ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ದುರುದ್ದೇಶಪೂರ್ವಕವಾಗಿ ಆಕ್ಷೇಪಣೆ ಸಲ್ಲಿಸಲಾಗುತ್ತಿದೆ. ಈ ಮೂಲಕ ನಿರ್ದಿಷ್ಟ ಸಮುದಾಯದ ಮತದಾರರನ್ನು ಗುರಿಯಾಗಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು.ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರುಗಳು ಯಾವುದೇ ಕಾರಣಕ್ಕೂ ಕೈತಪ್ಪದಂತೆ ಚುನಾವಣಾ ಆಯೋಗ ಎಚ್ಚರಿಕೆ ವಹಿಸಬೇಕು ಎಂದು ಮುಶ್ರಿಫ್ ಒತ್ತಾಯಿಸಿದ್ದರು. ಸುಳ್ಳು ಆಕ್ಷೇಪಣೆಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಯಾವುದೇ ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬಾರದು ಎಂದು ಆಗ್ರಹಿಸಿದ್ದರು.
ಇತ್ತ ಕಾಂಗ್ರೆಸ್ ಆರೋಪಕ್ಕೆ ಯತ್ನಾಳ ಬೆಂಬಲಿಗರು ತಿರುಗೇಟು ನೀಡಿದ್ದಾರೆ. ಫಾರ್ಮ್-7ರಲ್ಲಿ ಆಕ್ಷೇಪಣೆ ಸಲ್ಲಿಸುವುದು ನಿಯಮಬದ್ಧ ಪ್ರಕ್ರಿಯೆ ಯಾಗಿದ್ದು, ಅರ್ಹ ಮತದಾರರ ಹೆಸರು ಉಳಿಯಬೇಕು ಎಂಬುದೇ ತಮ್ಮ ಉದ್ದೇಶ ಎಂದು ಹೇಳಿದ್ದಾರೆ. ಇದೇ ವೇಳೆ, ಕಾಂಗ್ರೆಸ್ ಮುಖಂಡರು ಬಿಎಲ್‌ಒಗಳಿಗೆ ಅಂಜಿಕೆ, ಬೆದರಿಕೆ ಹಾಗೂ ಧಮಕಿ ಹಾಕುತ್ತಿದ್ದಾರೆ ಎಂದು ಆರೋಪಿಸಿ, ಇಂತಹ ಒತ್ತಡಗಳಿಗೆ ತಾವು ಹೆದರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಒಟ್ನಲ್ಲಿ ಎಸ್‌ಐಆರ್ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಇದೀಗ ಕಾಂಗ್ರೆಸ್ ಆರೋಪಕ್ಕೆ ಯತ್ನಾಳ ಬೆಂಬಲಿಗರ ತಿರುಗೇಟು ಸಿಕ್ಕಿದೆ. ಆರೋಪ–ಪ್ರತ್ಯಾರೋಪ ಹೆಚ್ಚಾಗಿದೆ.ಈ ನಡುವೆ ವಾಕ್ಸಮರ್ ಮುಂದುವರೆಯುವ ಲಕ್ಷಣಗಳು ದಟ್ಟವಾಗಿವೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
