Vijaypura

ಶಾಸಕ ಯಶವಂತರಾಯಗೌಡ ಪಾಟೀಲ ರಾಜೀನಾಮೆ ಬೆನ್ನಲ್ಲೇ ಇಂಡಿ, ಚಡಚಣ ಬರಪೀಡಿತ ಪಟ್ಟಿಗೆ ಸೇರ್ಪಡೆ

Share

ಬರಪೀಡಿತ ತಾಲೂಕುಗಳ ಪಟ್ಟಿಯಿಂದ ವಿಜಯಪುರ ಜಿಲ್ಲೆಯ ಇಂಡಿ ಹಾಗೂ ಚಡಚಣ ತಾಲೂಕು ಗಳನ್ನು ಕೈಬಿಟ್ಟಿದ್ದಕ್ಕೆ ಬೇಸರಗೊಂಡು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೊಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ವಿಜಯಪುರ ಜಿಲ್ಲೆಯ ಇಂಡಿ ಹಾಗೂ ಚಡಚಣ ತಾಲೂಕು ಗಳಲ್ಲಿ ಬರ ಪರಿಸ್ಥಿತಿ ತೀವ್ರ ವಾಗಿದ್ದರೂ ಆರಂಭದಲ್ಲಿ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಈ ಎರಡೂ ತಾಲೂಕುಗಳನ್ನು ಕೈಬಿಡಲಾಗಿತ್ತು. ಇದನ್ನು ವಿರೋಧಿಸಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಹಲವು ಬಾರಿ ಸರ್ಕಾರದ ಗಮನಕ್ಕೆ ತಂದಿದ್ದರು.

ಆದರೂ ತಮ್ಮ ಮನವಿಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ “ನಮ್ಮ ಮಾತಿಗೆ, ನಮ್ಮ ಭಾವನೆಗಳಿಗೆ ಬೆಲೆ ಇಲ್ಲದಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದ ಶಾಸಕ ಯಶವಂತರಾಯಗೌಡ ಪಾಟೀಲ್, ಬುಧವಾರ ವಿಧಾನಸಭಾಧ್ಯಕ್ಷರನ್ನು ಭೇಟಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಅವರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿರಲಿಲ್ಲ.

ಶಾಸಕರ ರಾಜೀನಾಮೆ ವಿಚಾರ ವಿಧಾನಸಭೆಯಲ್ಲೂ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಸ್ಥಳ ಸತ್ಯಶೋಧನಾ ವರದಿ ಆಧರಿಸಿ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 29 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಿದೆ.
ಈ 29 ತಾಲೂಕುಗಳ ಪೈಕಿ ವಿಜಯಪುರ ಜಿಲ್ಲೆಯ ಇಂಡಿ ಹಾಗೂ ಚಡಚಣ ತಾಲೂಕುಗಳೂ ಸೇರಿವೆ. ಸರ್ಕಾರದ ಅಧಿಸೂಚನೆ ಯೊಂದಿಗೆ ಎರಡೂ ತಾಲೂಕುಗಳ ರೈತರಿಗೆ ಬರ ಪರಿಹಾರ ಹಾಗೂ ಸರ್ಕಾರದ ನಿಯಮಾನುಸಾರ ದೊರೆಯುವ ಸೌಲಭ್ಯಗಳ ನಿರೀಕ್ಷೆ ಮೂಡಿದೆ.
ಶಾಸಕರ ರಾಜೀನಾಮೆ ನಿರ್ಧಾರದ ಬೆನ್ನಲ್ಲೇ ಇಂಡಿ, ಚಡಚಣ ಬರಪಟ್ಟಿಗೆ ಸೇರ್ಪಡೆಯಾಗಿರುವುದು ವಿಜಯಪುರ ಜಿಲ್ಲೆಯ ರಾಜಕೀಯ ವಲಯದಲ್ಲೂ ಗಮನ ಸೆಳೆದಿದೆ.

Tags:

error: Content is protected !!