Vijaypura

ಬಿಜೆಪಿ ವ್ಯಂಗ್ಯದ ನಡುವೆಯೇ ಬರ ಘೋಷಣೆ;ಶಾಸಕ ಯಶವಂತರಾಯಗೌಡ ಪಾಟೀಲರ ಮುಂದಿನ ನಡೆ ಕುತೂಹಲ

Share

ವಿಜಯಪುರ ಜಿಲ್ಲೆಯ ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸದಿದ್ದಕ್ಕೆ ಬೇಸರಗೊಂಡು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಅಂಗೀಕಾರವಾಗದಿದ್ದರೂ ಈ ವಿಚಾರ ಸರ್ಕಾರಕ್ಕೆ ಮುಜುಗರ ತಂದಿತ್ತು. ಇತ್ತ ಬಿಜೆಪಿ ನಾಯಕರು ಶಾಸಕರ ರಾಜೀನಾಮೆಯನ್ನು ವ್ಯಂಗ್ಯವಾಡಿದ್ದರು. ಇದೀಗ ಶಾಸಕ ರಾಜೀನಾಮೆ ನೀಡಿದ ಬೆನ್ನಲ್ಲೇ ಸರ್ಕಾರ ಇಂಡಿ–ಚಡಚಣ ಎರಡೂ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ಬರಪೀಡಿತ ಪಟ್ಟಿಯಿಂದ ವಿಜಯಪುರ ಜಿಲ್ಲೆಯ ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಕೈಬಿಟ್ಟಿದ್ದಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಅಸಮಾಧಾನ ಗೊಂಡಿದ್ದರು. ಹಲವು ಬಾರಿ ಸರ್ಕಾರದ ಗಮನಕ್ಕೆ ತಂದರೂ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಕ್ಷೇತ್ರದ ಜನರ ಕಷ್ಟಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಆದರೆ ಸ್ಪೀಕರ್ ಜಿ.ಎಸ್. ಪಾಟೀಲ ಅವರು ರಾಜೀನಾಮೆ ಪತ್ರ ನಿಯಮಬದ್ಧವಾಗಿಲ್ಲ ಎಂದು ಹೇಳಿ ಅದನ್ನು ಅಂಗೀಕರಿಸಿರಲಿಲ್ಲ. ರಾಜೀನಾಮೆ ಸಲ್ಲಿಕೆಯ ಮೂಲಕ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿದ್ದ ಶಾಸಕರ ನಡೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತುಇನ್ನು ಶಾಸಕ ಯಶವಂತರಾಯಗೌಡ ಪಾಟೀಲರ ರಾಜೀನಾಮೆಯನ್ನು ಬಿಜೆಪಿ ನಾಯಕರು ರಾಜಕೀಯವಾಗಿ ವ್ಯಂಗ್ಯವಾಡಿದರು.

ಇನ್ನೂ ವಿಜಯಪುರ ಸಂಸದ ರಮೇಶ ಜಿಗಜಿಣಗಿ, “ರೂಲಿಂಗ್ ಪಾರ್ಟಿಯ ಶಾಸಕನೇ ರಾಜೀನಾಮೆ ಕೊಡ್ತಾರೆ ಅಂದ್ರೆ ನಂಬೋದಕ್ಕಾಗುತ್ತಾ?” ಎಂದು ಪ್ರಶ್ನಿಸಿದರು.
ಅಷ್ಟೇ ಅಲ್ಲ, ರಾಜೀನಾಮೆ ನೀಡಿದವರು ಅದನ್ನು ವಾಪಸ್ ಪಡೆಯಬಾರದು ಎಂದು ವ್ಯಂಗ್ಯವಾಡಿದ ಜಿಗಜಿಣಗಿ, ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ಸಿಗದಿರುವ ಅಸಮಾಧಾನ ದಿಂದಲೇ ರಾಜೀನಾಮೆ ನೀಡಿದ್ದಾರೆ ಎಂದು ಆರೋಪಿಸಿದರು. ಒಂದೆಡೆ ಬಿಜೆಪಿ ನಾಯಕರ ವ್ಯಂಗ್ಯ–ಟೀಕೆ.. ಮತ್ತೊಂದೆಡೆ ತಮ್ಮ ಕ್ಷೇತ್ರದ ಬರದ ವಿಚಾರದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರ ರಾಜೀನಾಮೆ.. ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು.

ಇದೀಗ ಇಡೀ ಬೆಳವಣಿಗೆಗೆ ಹೊಸ ತಿರುವು ಸಿಕ್ಕಿದೆ. ಸ್ಥಳ ಸತ್ಯಶೋಧನಾ ವರದಿ ಆಧರಿಸಿ ಸರ್ಕಾರ ಹೆಚ್ಚುವರಿಯಾಗಿ 29 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿದ್ದು, ಇಂಡಿ ಹಾಗೂ ಚಡಚಣ ತಾಲೂಕುಗಳೂ ಬರಪಟ್ಟಿಗೆ ಸೇರ್ಪಡೆಯಾಗಿವೆ.
ಹೀಗಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಮುಂದಿಟ್ಟಿದ್ದ ಪ್ರಮುಖ ಬೇಡಿಕೆ ಈಡೇರಿದಂತಾಗಿದೆ.ಒಟ್ಟಿನಲ್ಲಿ ಬರದ ವಿಚಾರದಲ್ಲಿ ಶಾಸಕ ರಾಜೀನಾಮೆ.. ಬಿಜೆಪಿಯ ವ್ಯಂಗ್ಯ–ಟೀಕೆ.. ಇದೀಗ ಸರ್ಕಾರದಿಂದ ಬರ ಘೋಷಣೆ. ರಾಜೀನಾಮೆಯಿಂದ ಆರಂಭವಾದ ರಾಜಕೀಯ ಬಿಕ್ಕಟ್ಟು ಸದ್ಯಕ್ಕೆ ಹೊಸ ತಿರುವು ಪಡೆದಿದೆ. ಈಗ ಯಶವಂತರಾಯಗೌಡ ಪಾಟೀಲರ ಮುಂದಿನ ನಡೆ ಏನು ಎಂಬುದೇ ಕುತೂಹಲ ಮೂಡಿಸಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!